2026-06-08 01:30:45

BJP government gave advertisements to Urdu newspapers | ಉರ್ದು ಪತ್ರಿಕೆಗಳಿಗೆ ಬಿಜೆಪಿ ಸರ್ಕಾರ ಜಾಹೀರಾತು ನೀಡಿದ್ದು ಅಸಹ್ಯ ಅಲ್ಲವೇ ಸಿಎಂ ಪ್ರಶ್ನೆ | Speed News Kannada

BJP government gave advertisements to Urdu newspapers | ಉರ್ದು ಪತ್ರಿಕೆಗಳಿಗೆ ಬಿಜೆಪಿ ಸರ್ಕಾರ ಜಾಹೀರಾತು ನೀಡಿದ್ದು ಅಸಹ್ಯ ಅಲ್ಲವೇ ಸಿಎಂ ಪ್ರಶ್ನೆ | Speed News Kannada

ಬೆಂಗಳೂರು: ಉರ್ದು ಪತ್ರಿಕೆಯಲ್ಲಿ ಸರ್ಕಾರದ ಜಾಹೀರಾತೊಂದು ಉರ್ದು ಭಾಷೆಯಲ್ಲಿ ಪ್ರಕಟಗೊಂಡಿದ್ದನ್ನು ವಿರೋಧಿಸಿ ವಿಪಕ್ಷಗಳ ನಾಯಕರು ಆಡಿರುವ ವೀರಾವೇಶದ ಮಾತುಗಳನ್ನು ಆಲಿಸಿದೆ. ಹಿಂದೆ ತಾವೇ ಅಧಿಕಾರದಲ್ಲಿ ಇದ್ದಾಗ ಉರ್ದು ಭಾಷೆಯ ಜಾಹೀರಾತು ನೀಡಿ, ಈಗ ನಮ್ಮ ವಿರುದ್ಧ ಮುಗಿಬೀಳುವುದು ಆತ್ಮವಂಚನೆ ಮತ್ತು ಅಸಹ್ಯದ ಪರಮಾವಧಿ. ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು ಅಧಿಕಾರದಲ್ಲಿದ್ದಾಗ ಯಾರ ಓಲೈಕೆ ಮಾಡಲು ಉರ್ದು ಜಾಹೀರಾತು ನೀಡಿದ್ದರು? ಎಂದು ಹೇಳಿ ಪುಣ್ಯಕಟ್ಟಿಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ
ಸಾಮಾಜಿಕ ಜಾಲತಾಣಗಳಲ್ಲಿ ಉರ್ದು ಜಾಹಿರಾತು ಕುರಿತು ಸ್ಪಷ್ಟನೆ ನೀಡಿದ್ದಾರೆ. 
ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದಲೇ ಸರ್ಕಾರ ಜಾಹೀರಾತು ನೀಡುತ್ತದೆ. ಹೆಚ್ಚೆಚ್ಚು ಜನರನ್ನು ತಲುಪುತ್ತದೆ ಎನ್ನುವ ಕಾರಣಕ್ಕಾಗಿ ಆಯಾ ಭಾಷೆಯ ಪತ್ರಿಕೆಗಳಲ್ಲಿ ಅದೇ ಭಾಷೆಯ ಜಾಹೀರಾತು ನೀಡುವುದು ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿ. ಇದರಿಂದ ಪತ್ರಿಕೆಯ ಓದುಗರಿಗೆ ಜಾಹೀರಾತಿನ ವಿಚಾರ ಅರ್ಥವಾಗಿ, ಜಾಹೀರಾತು ನೀಡಿದ ಉದ್ದೇಶವೂ ಈಡೇರುತ್ತದೆ.
ಬಿಜೆಪಿ ನಾಯಕರು ಒಂದಲ್ಲ, ಎರಡಲ್ಲ ಹತ್ತಾರು ಬಾರಿ ಉರ್ದು ಜಾಹೀರಾತುಗಳನ್ನು ನೀಡಿದ್ದಾರೆ, ಆಗ ಅವರಿಗೆ ಅದು ತುಷ್ಟೀಕರಣ ಅನ್ನಿಸಲಿಲ್ಲ. ಈಗ ನಮ್ಮ ಸರ್ಕಾರ ನೀಡಿರುವ ಉರ್ದು ಜಾಹೀರಾತು ಕಂಡೊಡನೆ ಅವರೊಳಗಿನ ಕನ್ನಡಪ್ರೇಮ ಇದ್ದಕ್ಕಿದ್ದಂತೆ ಎದ್ದುನಿಂತಿದೆ. ನಿಮ್ಮ ಈ 'ಹಿಪೋಕ್ರಸಿ' ಗೋಸುಂಬೆಯನ್ನೇ ನಾಚಿಸುವಂತಿದೆ. 
ನೆಲ - ಜಲ - ಭಾಷೆಯ ಕಾಳಜಿಯ ಬಗ್ಗೆ ಬಿಜೆಪಿ ನಾಯಕರಿಂದ ಪಾಠ ಹೇಳಿಸಿಕೊಳ್ಳಬೇಕಾದ ದರಿದ್ರ ಸ್ಥಿತಿ ನಮಗೆ ಬಂದಿಲ್ಲ. ಕನ್ನಡ ಮತ್ತು ಕನ್ನಡಿಗರ ಹಿತ ಕಾಯುವ ವಿಚಾರ ಬಂದಾಗ ರಾಜಕೀಯ ಬದಿಗಿಟ್ಟು, ಹೋರಾಟದ ಮೊದಲ ಸಾಲಿನಲ್ಲಿ ನಿಂತವನು ನಾನು. ಇದಕ್ಕೆ ಇತಿಹಾಸ ಸಾಕ್ಷಿ. ಕನ್ನಡ ಕಾವಲು ಸಮಿತಿಯ ಅಧ್ಯಕ್ಷನಾಗಿಯೇ ರಾಜಕೀಯ ಜೀವನಕ್ಕೆ ಕಾಲಿರಿಸಿದ ನನಗೆ ಕನ್ನಡ ಬರಿ ಭಾಷೆಯಲ್ಲ, ಬದುಕು ಹೌದು. ಜೈ ಕರ್ನಾಟಕ, ಜೈ ಕನ್ನಡ.. ಎಂದು ಹೇಳಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.