ಬೆಂಗಳೂರು: ವಿಧಾನಸೌಧದ ಒಳಗೆ ಮಾಧ್ಯಮಗಳಿಗೆ ನಿರ್ಬಂಧ ಹೇರಿರುವ ಆದೇಶವನ್ನು ಹಿಂಪಡೆಯುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಸರ್ಕಾರವನ್ನು ಆಗ್ರಹಪಡಿಸಿದ್ದಾರೆ.
ಅವರು ಇಂದು ಮಾಧ್ಯಮಗಳ ಜೊತೆ ಮಾತನಾಡುತ್ತಾ ಕಾಂಗ್ರೆಸ್ ಸರಕಾರ ನಾಲಾಯಕ್ ಎಂದು ಜನರು ಮಾತನಾಡುತ್ತಿದ್ದಾರೆ. ಇದಕ್ಕೆ ಪುಷ್ಟಿ ಕೊಡುವಂತೆ ಇಂದು ಮಾಧ್ಯಮಗಳಿಗೆ ನಿರ್ಬಂಧ ಹೇರಿ ಮತ್ತೊಂದು ನಿರ್ಧಾರ ತೆಗೆದುಕೊಂಡಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಟೀಕಿಸಿದರು.
ಇಂತಹ ತೀರ್ಮಾನಗಳನ್ನು ಏಕೆ ತೆಗೆದುಕೊಳ್ಳುತ್ತಾರೆ ಎಂದು ಅರ್ಥವಾಗುತ್ತಿಲ್ಲ. ಕಳೆದ ಬೆಳಗಾವಿಯ ಅಧಿವೇಶನದ ಸಂದರ್ಭದಲ್ಲಿ ದ್ವೇಷ ಭಾಷಣ ಸಂಬಂಧ ಕಾಯ್ದೆ ತಂದಿದ್ದರು. ಈ ಸರಕಾರದ ಒಂದೊಂದು ನಿರ್ಣಯವೂ ಪ್ರಜಾಪ್ರಭುತ್ವವನ್ನು ಅಣಕಿಸುವ ರೀತಿಯಲ್ಲಿ ಇರುತ್ತದೆ ಎಂದರು.
ಮಾಧ್ಯಮಗಳಿಗೆ ನಿರ್ಬಂಧ ಹೇರಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಇದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಮತ್ತೊಮ್ಮೆ ಹೇಳುವುದಾಗಿ ತಿಳಿಸಿದರು.
ಪಾಕಿಸ್ತಾನ ಜಿಂದಾಬಾದ್ ಎಂದು ಜಯಘೋಷ ಕೂಗುವುದಕ್ಕೆ ಕಡಿವಾಣ ಹಾಕಲು ಈ ಸರಕಾರಕ್ಕೆ ಸಾಧ್ಯವಾಗಿಲ್ಲ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಮೊಳಗಿದರೂ ಪುರಾವೆಗಳಿಲ್ಲವೆಂದು ತಿಳಿಸಿದ್ದರು. ಈಗ ಸಚಿವರ ಕಚೇರಿಯಲ್ಲಿ ಕಳ್ಳತನದ ನೆಪವೊಡ್ಡಿ ಈ ರೀತಿ ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದಾರೆ ಎಂದು ತಿಳಿಸಿದರು.
ಬಿಜೆಪಿಯ ಅನೇಕ ಶಾಸಕರೂ ಇದೇ ಆಗ್ರಹವನ್ನು ಮಾಡಿದ್ದಾರೆ.