ಬಾಲಿವುಡ್ ನಟಿಯರಾದ ಶ್ರದ್ಧಾ ಕಪೂರ್ ಮತ್ತು ನೋರಾ ಫತೇಹಿ ಅವರಿಗೆ ಬಹುದಿನಗಳ ಕಾಲ ತಲೆನೋವಾಗಿದ್ದ 2022ರ ಡ್ರಗ್ಸ್ ಪ್ರಕರಣದಲ್ಲಿ ಬಿಗ್ ರಿಲೀಫ್ ಸಿಕ್ಕಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎನ್ನಲಾಗುತ್ತಿದೆ. ಮುಂಬೈ ಪೊಲೀಸರು ಸಿದ್ಧಪಡಿಸುತ್ತಿರುವ ಪೂರಕ ದೋಷಾರೋಪ ಪಟ್ಟಿಯಲ್ಲಿ ಕೇವಲ ನಟಿಯರಷ್ಟೇ ಅಲ್ಲದೆ, ಸೋಷಿಯಲ್ ಮೀಡಿಯಾ ಸ್ಟಾರ್ ಓರಿ, ನಟ ಸಿದ್ದಾಂತ್ ಕಪೂರ್ ಮತ್ತು ರಾಜಕಾರಣಿ ಜೀಶನ್ ಸಿದ್ದಿಕಿ ಅವರಿಗೂ ಕ್ಲೀನ್ ಚಿಟ್ ಸಿಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಪ್ರಕರಣದ ಹಿನ್ನೆಲೆ: 2022ರ ಆಗಸ್ಟ್ ತಿಂಗಳಲ್ಲಿ ಮುಂಬೈ ಪೊಲೀಸರ ಡ್ರಗ್ಸ್ ವಿರೋಧಿ ದಳವು ಮೊಹಮ್ಮದ್ ಸಲೀಂ ಶೇಖ್ ಎಂಬ ಡ್ರಗ್ ಪೆಡ್ಲರ್‌ನನ್ನು ಬಂಧಿಸಿ, ಆತನಿಂದ 1.19 ಲಕ್ಷ ರೂಪಾಯಿ ಮೌಲ್ಯದ ಮೆಫೆಡ್ರೋನ್ ವಶಪಡಿಸಿಕೊಂಡಿತ್ತು. ವಿಚಾರಣೆ ವೇಳೆ ಶೇಖ್, ತಾನು ಬಾಲಿವುಡ್‌ನ ಹಲವು ಗಣ್ಯರು ಭಾಗವಹಿಸುವ ಪಾರ್ಟಿಗಳಿಗೆ ಡ್ರಗ್ಸ್ ಪೂರೈಕೆ ಮಾಡಿದ್ದಾಗಿ ಹೇಳಿಕೆ ನೀಡಿದ್ದ. ಈ ಹೇಳಿಕೆಯ ಆಧಾರದ ಮೇಲೆ ಹಲವು ಪ್ರಮುಖರ ಹೆಸರುಗಳು ಹೊರಬಂದಿದ್ದವು. ಈ ತನಿಖೆಯ ಭಾಗವಾಗಿ 2025ರಲ್ಲಿ ಶ್ರದ್ಧಾ ಕಪೂರ್ ಮತ್ತು ನೋರಾ ಫತೇಹಿ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಖ್ಯಾತ ಸೆಲೆಬ್ರಿಟಿಗಳ ಹೆಸರು ತಳುಕು ಹಾಕಿಕೊಂಡಿದ್ದರಿಂದ ಈ ಪ್ರಕರಣವು ಭಾರಿ ಸುದ್ದಿ ಆಗಿತ್ತು. ಬಾಲಿವುಡ್ ಮಂದಿಗೆ ಚಿಂತೆ ಶುರುವಾಗಿತ್ತು. ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ತನಿಖಾಧಿಕಾರಿಗಳು ಈ ಗಣ್ಯರಿಗೂ ಮತ್ತು ಡ್ರಗ್ಸ್ ಪೂರೈಕೆ ಜಾಲಕ್ಕೂ ನೇರ ಸಂಬಂಧವಿರುವ ಯಾವುದೇ ಸಾಕ್ಷ್ಯಗಳನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ‘ನಾವು ಈಗಾಗಲೇ ಮೂವರ ವಿರುದ್ಧ ಪ್ರಾಥಮಿಕ ಚಾರ್ಜ್‌ಶೀಟ್ ಸಲ್ಲಿಸಿದ್ದೇವೆ. ಈಗ ಬಂಧಿತರಾಗಿರುವ ಇತರ ಆರೋಪಿಗಳ ವಿರುದ್ಧ ಪೂರಕ ಚಾರ್ಜ್‌ಶೀಟ್ ಸಲ್ಲಿಸಲಾಗುವುದು. ಸೆಲೆಬ್ರಿಟಿಗಳನ್ನು ಈ ಪ್ರಕರಣಕ್ಕೆ ಲಿಂಕ್ ಮಾಡಲು ನಮ್ಮ ಬಳಿ ಸಾಕಷ್ಟು ಪುರಾವೆಗಳಿಲ್ಲ’ ಎಂದು ಮೂಲಗಳು ತಿಳಿಸಿರುವುದಾಗಿ ವರದಿ ಆಗಿದೆ.