ಬೆಂಗಳೂರು: ಮುಂಬರುವ ಬೇಸಿಗೆಯಲ್ಲಿ ಎದುರಾಗಬಹುದಾದ ನೀರಿನ ಬೇಡಿಕೆ ಹಾಗು ನೀರಿನ ಅಭಾವ ಎದುರಾಗಬಹುದಾದ ಪ್ರದೇಶಗಳಲ್ಲಿ ಪರಿಸ್ಥಿತಿ ಪರಿಣಾಮಕಾರಿಯಾಗಿ ನಿಭಾಯಿಸಲು ಬೆಂಗಳೂರು ಜಲಮಂಡಳಿ ಅಗತ್ಯ ತಯಾರಿ ಮಾಡಿಕೊಂಡಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಡಾ. ವಿ. ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ಅವರು ಇಂದು ಜಲಮಂಡಳಿ ಕೇಂದ್ರ ಕಛೇರಿಯಲ್ಲಿ ಮುಂಬರುವ ಬೇಸಿಗೆಯ ಸಿದ್ದತೆಗಳ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿ ಸಿದ್ಧತೆಗಳ ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಅವರು, ನಗರದಾದ್ಯಂತ ಈ ಬಾರಿ ಬೇಸಿಗೆಯನ್ನು ಸಮರ್ಥವಾಗಿ ಎದುರಿಸಲು ಬೆಂಗಳೂರು ಜಲಮಂಡಳಿ ಸಿದ್ದವಾಗಿದೆ. ಈಗಾಗಲೇ, ನೀರಿನ ಅಭಾವ ಎದುರಾಗಬಹುದಾದ ಹಾಗೂ ಜನಸಾಂದ್ರಿತ ಪ್ರದೇಶಗಳನ್ನು ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿನ ಜನರಿಗೆ ಉಚಿತವಾಗಿ ಕುಡಿಯುವ ನೀರು ಒದಗಿಸಲು 'ಮಿನಿ ವಾಟರ್ ಟ್ಯಾಂಕ್'ಗಳನ್ನು (ಸಿಂಟೆಕ್ಸ್ ಟ್ಯಾಂಕ್) ಅಳವಡಿಸಲು ನಿರ್ಧರಿಸಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷರಾದ ಡಾ ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ಈ ಮಿನಿ ಟ್ಯಾಂಕ್‌ಗಳಿಗೆ ನೀರು ತುಂಬಿಸಲು ಬೆಂಗಳೂರು ಜಲಮಂಡಳಿ ಹಾಗೂ ಸಂಚಾರಿ ಕಾವೇರಿ ಟ್ಯಾಂಕರ್ ಗಳಿಗೆ ಆದ್ಯತೆ ನೀಡಬೇಕು, ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಖಾಸಗಿ ಟ್ಯಾಂಕರ್‌ಗಳನ್ನು ಬಾಡಿಗೆಗೆ ಪಡೆಯಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬೇಸಿಗೆ ನಿರ್ವಹಣೆಯಲ್ಲಿ ಯಾವುದೇ ನಿರ್ಲಕ್ಷ್ಯ ತೋರಬಾರದು ಎಂದು ಎಚ್ಚರಿಸಿದ ಅಧ್ಯಕ್ಷರು, ಎಲ್ಲಾ ಮುಖ್ಯ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ನೀರು ಪರಿವೀಕ್ಷಕರು ಕಚೇರಿಯಲ್ಲಿ ಕುಳಿತುಕೊಳ್ಳದೆ ಕ್ಷೇತ್ರದಲ್ಲೇ ಹಾಜರಿರಬೇಕು ಎಂದು ಸೂಚನೆ ನೀಡಿದರು. "ಅಧಿಕಾರಿಗಳು ಪ್ರತಿದಿನ ತಮ್ಮ ವ್ಯಾಪ್ತಿಯ ಪ್ರದೇಶಗಳಿಗೆ ಭೇಟಿ ನೀಡಿ, ಪರಿಸ್ಥಿತಿಯನ್ನು ಅವಲೋಕಿಸಬೇಕು ಮತ್ತು ಗುರುತಿಸಲಾದ ಪ್ರದೇಶಗಳಿಗೆ ನೀರು ತಲುಪುವುದನ್ನು ಖಚಿತಪಡಿಸಿಕೊಳ್ಳಬೇಕು," ಎಂದು ಡಾ. ಮನೋಹರ್ ಖಡಕ್ ಸೂಚನೆ ನೀಡಿದರು.