ಚೆನ್ನೈ ಮತ್ತು ಬೆಂಗಳೂರು ನಡುವಿನ ಪ್ರಯಾಣವನ್ನು ಸುಗಮಗೊಳಿಸಲು ನಿರ್ಮಿಸಲಾಗುತ್ತಿರುವ ಎಕ್ಸ್‌ಪ್ರೆಸ್‌ವೇ, ಕೇವಲ ಪ್ರಯಾಣಿಕರಿಗಷ್ಟೇ ಅಲ್ಲ ಮೂಕ ಪ್ರಾಣಿಗಳಿಗೂ ವರದಾನವಾಗಲಿದೆ. ಹೌದು, ಬಹುನಿರೀಕ್ಷಿತ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇಯಲ್ಲಿ ವನ್ಯಜೀವಿಗಳ ಸುರಕ್ಷಿತ ಸಂಚಾರಕ್ಕಾಗಿ ವಿಶೇಷವಾದ 'ವನ್ಯಜೀವಿ ಮೇತುವೆ' (Wildlife Overpass) ಅಥವಾ ಪ್ರಾಣಿ ಸ್ನೇಹಿ ಸೇತುವೆಯನ್ನು ನಿರ್ಮಿಸಲು ಸಿದ್ಧತೆ ನಡೆಸಲಾಗಿದೆ.
ಈ ಯೋಜನೆಯು ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಎರಡನ್ನೂ ಒಟ್ಟಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.
ಏನಿದು ವನ್ಯಜೀವಿ ಓವರ್‌ಪಾಸ್? ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನೀಡಿರುವ ಮಾಹಿತಿಯ ಪ್ರಕಾರ, ಈ ಎಕ್ಸ್‌ಪ್ರೆಸ್‌ವೇ ತಮಿಳುನಾಡಿನ ರಾಣಿಪೇಟೆ ಮತ್ತು ವೆಲ್ಲೂರು ನಡುವೆ ಇರುವ ಮಹಿಮಂಡಲಂ ಮೀಸಲು ಅರಣ್ಯ ಪ್ರದೇಶದ ಮೂಲಕ ಹಾದುಹೋಗುತ್ತದೆ. ಈ ಅರಣ್ಯವು ಆನೆ, ಚಿರತೆ, ಕಾಡೆಮ್ಮೆ, ಕಾಡುಹಂದಿ ಮತ್ತು ಜಿಂಕೆ ಸೇರಿದಂತೆ ಅನೇಕ ವನ್ಯಜೀವಿಗಳಿಗೆ ಆವಾಸಸ್ಥಾನವಾಗಿದೆ.
ಸಾಮಾನ್ಯವಾಗಿ ಹೆದ್ದಾರಿಗಳಲ್ಲಿ ವಾಹನಗಳು ವೇಗವಾಗಿ ಚಲಿಸುವುದರಿಂದ ಪ್ರಾಣಿಗಳು ರಸ್ತೆ ದಾಟುವಾಗ ಅಪಾಯಕ್ಕೆ ಸಿಲುಕುತ್ತವೆ. ಇದನ್ನು ತಪ್ಪಿಸಲು, ಹೆದ್ದಾರಿಯ ಮೇಲ್ಬಾಗದಲ್ಲಿ 90 ಮೀಟರ್ ಉದ್ದ ಹಾಗೂ 25 ಮೀಟರ್ ಅಗಲದ ಬೃಹತ್ ಸೇತುವೆಯನ್ನು ನಿರ್ಮಿಸಲಾಗುತ್ತಿದೆ.ಈ ಸೇತುವೆಯು ರಸ್ತೆಯಿಂದ ಸುಮಾರು 5.5 ಮೀಟರ್ ಎತ್ತರದಲ್ಲಿ ಇರಲಿದ್ದು, ಇದರ ಮೇಲೆ ವಾಹನಗಳ ಬದಲಾಗಿ ದಟ್ಟವಾದ ಹುಲ್ಲುಗಾವಲು ಮತ್ತು ಗಿಡಮರಗಳನ್ನು ಬೆಳೆಸಲಾಗುತ್ತದೆ.
ಇದರಿಂದ ಪ್ರಾಣಿಗಳಿಗೆ ತಾವು ಸೇತುವೆಯ ಮೇಲೆ ನಡೆಯುತ್ತಿದ್ದೇವೆ ಎಂಬ ಭಾವನೆ ಬಾರದೆ, ಕಾಡಿನಲ್ಲೇ ಸಂಚರಿಸುತ್ತಿರುವ ಅನುಭವವಾಗುತ್ತದೆ. ತಮಿಳುನಾಡು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಈ ಕೃತಕ ಹುಲ್ಲುಗಾವಲನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಇದು ನೈಸರ್ಗಿಕ ಪರಿಸರದೊಂದಿಗೆ ಸುಲಭವಾಗಿ ಬೆರೆತು ಹೋಗಲಿದೆ.
ಶಬ್ದ ಮಾಲಿನ್ಯದಿಂದ ಮುಕ್ತಿ
ಅತ್ಯಂತ ವೇಗವಾಗಿ ಚಲಿಸುವ ವಾಹನಗಳ ಶಬ್ದವು ಕಾಡಿನ ಪ್ರಾಣಿಗಳಿಗೆ ಕಿರಿಕಿರಿ ಉಂಟುಮಾಡಬಾರದು ಎಂಬ ಕಾರಣಕ್ಕೆ, ಈ ಯೋಜನೆಯಲ್ಲಿ ಶಬ್ದ ತಡೆಗೋಡೆಗಳನ್ನು (Noise Barriers) ಅಳವಡಿಸುವ ಸಾಧ್ಯತೆಯೂ ಇದೆ. ಇದರಿಂದ ಪ್ರಾಣಿಗಳು ಯಾವುದೇ ಭಯವಿಲ್ಲದೆ ತಮ್ಮ ಆವಾಸಸ್ಥಾನದಲ್ಲಿ ಮುಕ್ತವಾಗಿ ಸಂಚರಿಸಬಹುದು ಎಂದು NHAI ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದೆ. "ಮೂಲಸೌಕರ್ಯ ಅಭಿವೃದ್ಧಿಯ ಜೊತೆಗೆ ವನ್ಯಜೀವಿಗಳ ರಕ್ಷಣೆಯು ನಮ್ಮ ಆದ್ಯತೆಯಾಗಿದೆ," ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಯೋಜನೆಯ ಪ್ರಗತಿ
ಒಟ್ಟು 258 ಕಿಲೋಮೀಟರ್ ಉದ್ದದ ಈ 4-ಪಥದ ಎಕ್ಸ್‌ಪ್ರೆಸ್‌ವೇ (ದಕ್ಷಿಣ ಭಾರತದ ಮೊದಲ ಹಸಿರು ಹೆದ್ದಾರಿ ಎನ್ನಲಾಗುತ್ತಿದೆ) ಮೇ 2022 ರಲ್ಲಿ ನಿರ್ಮಾಣ ಕಾರ್ಯವನ್ನು ಆರಂಭಿಸಿತು. ಕರ್ನಾಟಕದ ವ್ಯಾಪ್ತಿಗೆ ಬರುವ 71 ಕಿಲೋಮೀಟರ್ ರಸ್ತೆ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಉಳಿದ ಭಾಗಗಳ ಕಾಮಗಾರಿ ಭರದಿಂದ ಸಾಗಿದ್ದು, 2026ರ ಮಧ್ಯಭಾಗದ ವೇಳೆಗೆ ಈ ಹೆದ್ದಾರಿ ಪೂರ್ಣ ಪ್ರಮಾಣದಲ್ಲಿ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆಯಿದೆ.
ಈ ಹಿಂದೆ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲೂ ಪ್ರಾಣಿಗಳಿಗೆ ಅಂಡರ್‌ಪಾಸ್‌ಗಳನ್ನು ನಿರ್ಮಿಸಲಾಗಿತ್ತು. ಆದರೆ, ಮಹಿಮಂಡಲಂ ಅರಣ್ಯದಲ್ಲಿ ನಿರ್ಮಿಸಲಾಗುತ್ತಿರುವ ಈ ಓವರ್‌ಪಾಸ್, ಪ್ರಾಣಿಗಳಿಗೆ ಯಾವುದೇ ಅಂಜಿಕೆಯಿಲ್ಲದೆ ಒಂದೆಡೆಯಿಂದ ಮತ್ತೊಂದೆಡೆಗೆ ಹೋಗಲು ಅನುವು ಮಾಡಿಕೊಡುವ ಮೂಲಕ ಮಾನವ-ಪ್ರಾಣಿ ಸಂಘರ್ಷವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯನ್ನು ನಾಶಮಾಡದೆ, ಅದರೊಂದಿಗೆ ಹೊಂದಿಕೊಂಡು ಬಾಳುವ ಇಂತಹ ಯೋಜನೆಗಳು ನಿಜಕ್ಕೂ ಉತ್ತಮ.