ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದಾಗ ಏಕಾಏಕಿ ಜೇನುನೊಣಗಳ ಗುಂಪು ದಾಳಿ ನಡೆಸಿದ ಪರಿಣಾಮ ಅಂಪೈರ್ ವೊಬ್ಬರು ಮೃತಪಟ್ಟಿದ್ದಾರೆ. ಈ ವೇಳೆ ಹಲವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾನ್ಪುರ ಕ್ರಿಕೆಟ್ ಅಸೋಸಿಯೇಷನ್‌ಗೆ ಸೇರಿದ ಮನಿಕ್ ಗುಪ್ತಾ (65) ಜೇನು ನೊಣ ದಾಳಿಯಲ್ಲಿ ಮೃತಪಟ್ಟ ಅಂಪೈರ್. ಅಂಡರ್-13 ಕ್ರಿಕೆಟ್ ಪಂದ್ಯ ನಡೆಯುತ್ತಿದ್ದು, ಮನಿಕ್ ಗುಪ್ತಾ ದಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಏಕಾಏಕಿ ಜೇನು ನೊಣಗಳು ದಾಳಿ ನಡೆಸುತ್ತಿದ್ದಂತೆ ಆಟಗಾರರು ಹಾಗೂ ಪ್ರೇಕ್ಷಕರು ತಮ್ಮನ್ನು ದಿಕ್ಕಪಾಲಾಗಿ ಓಡಿಹೋಗಿದ್ದಾರೆ. ಜೇನುನೊಣಗಳು ಕಚ್ಚಿದ್ದರಿಂದ ಗುಪ್ತಾ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಅಸು ನೀಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಬ್ಬ ಅಂಪೈರ್ ಜಗದೀಶ್ ಶರ್ಮಾ ಅವರೂ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಗಾಯಗೊಂಡ ಆಟಗಾರರು ಮತ್ತು ಪ್ರೇಕ್ಷಕರು ಅಪಾಯದಿಂದ ಪಾರಾಗಿದ್ದಾರೆ. ಮನಿಕ್ ಗುಪ್ತಾ ಅವರು ಸುಮಾರು 30 ವರ್ಷಗಳ ಕಾಲ ಕಾನ್ಪುರ ಕ್ರಿಕೆಟ್ ಅಸೋಸಿಯೇಷನ್ ನಲ್ಲಿ ಅಂಪೈರ್ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ.