2026-05-12 04:45:55

Bangladeshi citizen was sentenced to three years in jail | ನಕಲಿ ದಾಖಲೆ ಸೃಷ್ಟಿಸಿ ಭಾರತದ ಪಾಸ್‌ಪೋರ್ಟ್ ಪಡೆದಿದ್ದ ಬಾಂಗ್ಲಾ ಪ್ರಜೆಗೆ ಮೂರು ವರ್ಷ ಜೈಲು ಶಿಕ್ಷೆ | Speed News Kannada

Bangladeshi citizen was sentenced to three years in jail | ನಕಲಿ ದಾಖಲೆ ಸೃಷ್ಟಿಸಿ ಭಾರತದ ಪಾಸ್‌ಪೋರ್ಟ್ ಪಡೆದಿದ್ದ ಬಾಂಗ್ಲಾ ಪ್ರಜೆಗೆ ಮೂರು ವರ್ಷ ಜೈಲು ಶಿಕ್ಷೆ | Speed News Kannada

ಲಕ್ಕೆ: ನಕಲಿ ದಾಖಲೆಗಳನ್ನು ನೀಡಿ ಭಾರತೀಯ ಪಾಸ್‌ಪೋರ್ಟ್ ಪಡೆದಿದ್ದಲ್ಲದೆ, ಅಕ್ರಮವಾಗಿ ಭೂಮಿ ನೋಂದಣಿ ಮಾಡಿಸಿಕೊಂಡಿದ್ದ ಬಾಂಗ್ಲಾದೇಶದ ಪ್ರಜೆಯೊಬ್ಬನಿಗೆ ಉತ್ತರ ಪ್ರದೇಶದ ನ್ಯಾಯಾಲಯವು ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಬಾಂಗ್ಲಾದೇಶದ ಕಾಕ್ಸ್ ಬಜಾರ್‌ನಲ್ಲಿರುವ ರೋಹಿಂಗ್ಯಾ ನಿರಾಶ್ರಿತರ ಶಿಬಿರಕ್ಕೆ ಸೇರಿದ ಅಬ್ದುಲ್ ಅಮೀನ್ ಎಂಬಾತನೇ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಕೆಲವರ ಸಹಾಯದೊಂದಿಗೆ ಭಾರತೀಯ ಪೌರತ್ವದ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದನು. ಈ ಸುಳ್ಳು ದಾಖಲೆಗಳನ್ನು ಬಳಸಿ ಭಾರತೀಯ ಪಾಸ್‌ಪೋರ್ಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದ ಅಮೀನ್, ಆ ಪಾಸ್‌ಪೋರ್ಟ್ ಮೂಲಕ ಬಹೇನ್ ಮತ್ತು ಸೌದಿ ಅರೇಬಿಯಾ ದೇಶಗಳಿಗೆ ತಲಾ ಎರಡು ಬಾರಿ ಪ್ರಯಾಣ ಬೆಳೆಸಿದ್ದ. ಕೇವಲ ಪಾಸ್‌ಪೋರ್ಟ್ ಮಾತ್ರವಲ್ಲದೆ, ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಅಕ್ರಮವಾಗಿ ಜಮೀನನ್ನು ಕೂಡ ತನ್ನ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಕಳೆದ 2023ರ ಮಾರ್ಚ್ ತಿಂಗಳಲ್ಲಿ ಎಟಿಎಸ್ (ATS) ಘಟಕ ನೀಡಿದ ದೂರಿನ ಮೇರೆಗೆ ಬಲ್ಲಿಯಾ ಪೊಲೀಸರು ಈತನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಕುರಿತು ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶರಾದ ರಾಮಕೃಪಾಲ್ ಅವರು ಅಬ್ದುಲ್ ಅಮೀನ್‌ ತಪ್ಪಿತಸ್ಥ ಎಂದು ಘೋಷಿಸಿ, ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ 10,000 ರೂಪಾಯಿ ದಂಡ ವಿಧಿಸಿದ್ದಾರೆ. ವಿದೇಶಿ ಕಾಯ್ದೆ ಮತ್ತು ನಕಲಿ ದಾಖಲೆ ಸೃಷ್ಟಿಸಿದ ಆರೋಪದ ಅಡಿಯಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಓಂವೀರ್ ಸಿಂಗ್ ಮಾಹಿತಿ ನೀಡಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.