2026-06-08 01:20:33

ballot paper tampering, stay to fir against bjp mla jeevaraj| ಮತಪತ್ರ ತಿದ್ದಿದ ಆರೋಪ: ಶೃಂಗೇರಿ ಶಾಸಕ ಜೀವರಾಜ್‌ ವಿರುದ್ಧದ ಎಫ್ಐಆರ್‌ಗೆ ತಡೆ| Speed News Kannada

ballot paper tampering, stay to fir against bjp mla jeevaraj| ಮತಪತ್ರ ತಿದ್ದಿದ ಆರೋಪ: ಶೃಂಗೇರಿ ಶಾಸಕ ಜೀವರಾಜ್‌ ವಿರುದ್ಧದ ಎಫ್ಐಆರ್‌ಗೆ ತಡೆ| Speed News Kannada

ಬೆಂಗಳೂರು: ಮರು ಮತ ಎಣಿಕೆ ವೇಳೆ ಮತಪತ್ರಗಳನ್ನು ತಿದ್ದಿದ ಆರೋಪಕ್ಕೆ ಸಂಬಂಧಿಸಿದಂತೆ ಶೃಂಗೇರಿ ಶಾಸಕ ಡಿ.ಎನ್‌.ಜೀವರಾಜ್‌ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ. ಜೀವರಾಜ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ರಜಾಕಾಲದ ಏಕಸದಸ್ಯ ನ್ಯಾಯಪೀಠದ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರು ವಿಚಾರಣೆ ನಡೆಸಿ ಈ ಆದೇಶ ನೀಡಿದ್ದಾರೆ.

ವಿಚಾರಣೆ ವೇಳೆ ಜೀವರಾಜ್ ಪರ ಹಿರಿಯ ವಕೀಲ ಅಶೋಕ ಹಾರನಹಳ್ಳಿ ವಾದ ಮಂಡಿಸಿದರು. ನಂತರ ನ್ಯಾಯಪೀಠ, ಒಂದುವೇಳೆ ಗೊಂದಲಗಳಿದ್ದರೆ ಚುನಾವಣಾ ತಕರಾರು ಅರ್ಜಿಯಲ್ಲೇ ಉಲ್ಲೇಖಿಸಬೇಕಿತ್ತು. ರಾಜಕೀಯ ಒತ್ತಡದಿಂದ ದೂರು ದಾಖಲಿಸುವುದು ಸರಿಯಲ್ಲ. ಹೀಗಾದರೆ, ಯಾವ ಅಧಿಕಾರಿಯೂ ಸ್ವತಂತ್ರವಾಗಿ ಕೆಲಸ ಮಾಡಲಾಗುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಇದೇ 7ರವರೆಗೆ ಎಫ್ಐಆರ್ ಗೆ ತಡೆ ನೀಡಿ ವಿಚಾರಣೆ ಮುಂದೂಡಿತು.

ಏನಿದು ಪ್ರಕರಣ?:

2023ರ ಮೇ 13ರಂದು ಮತ ಎಣಿಕೆ ಮುಗಿದ ಬಳಿಕ ಜೀವರಾಜ್‌, ಈ ಹಿಂದಿನ ಚುನಾವಣಾಧಿಕಾರಿ ವೇದಮೂರ್ತಿ ಮತ್ತು ಅಂದಿನ ಚಿಕ್ಕಮಗಳೂರು ಜಿಲ್ಲಾಧಿಕಾರಿ ರಮೇಶ್‌ ಜತೆ ಸೇರಿ ಸಂಚು ರೂಪಿಸಿ ಮತಪೆಟ್ಟಿಗೆಗಳ ಸೀಲು ತೆಗೆದು ರಾಜೇಗೌಡ ಅವರಿಗೆ ಬಿದ್ದಿದ್ದ ಒಂದು ಕಟ್ಟಿನ 170 ಮತಗಳನ್ನು ತಿದ್ದಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿ ಮತ ಎಣಿಕೆಯಲ್ಲಿ ಭಾಗಿಯಾಗಿದ್ದ ಏಜೆಂಟ್‌ ಸುಧೀರ್‌ ಕುಮಾರ್‌ ಮುರೊಳ್ಳಿ 2026ರ ಮೇ 3ರಂದು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ದೂರಿನ ಅನ್ವಯ ಆರೋಪಿಗಳ ವಿರುದ್ಧ; ಭಾರತೀಯ ದಂಡ ಸಂಹಿತೆ–1860ರ (ಐಪಿಸಿ) ಕಲಂ 143 (ಅಕ್ರಮ ಕೂಟ), 465 (ಸುಳ್ಳು ದಾಖಲೆ ಸೃಷ್ಟಿ), 468 (ವಂಚಿಸಲು ಸುಳ್ಳು ದಾಖಲೆ ಸೃಷ್ಟಿ), 471 (ಸುಳ್ಳು ದಾಖಲೆಗಳನ್ನು ಅಸಲಿ ಎಂದು ಬಿಂಬಿಸುವುದು), 120ಬಿ (ಪಿತೂರಿ), ಮತ್ತು 149 (ಸಮಾನ ಉದ್ದೇಶ) ಜೊತೆಗೆ ಪ್ರಜಾಪ್ರತಿನಿಧಿ ಕಾಯ್ದೆ–1951ರ ಕಲಂ 136ರ (ಚುನಾವಣಾ ಅಕ್ರಮ) ಅಡಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.

 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.