ನವದೆಹಲಿ: ಬಕ್ರೀದ್ ಹಬ್ಬದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ದೇವೇಗೌಡ, ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಅನೇಕ ಗಣ್ಯರು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.
ಪ್ರಧಾನಿ ಮೋದಿ ಅವರು ತಮ್ಮ ಸಂದೇಶದಲ್ಲಿ, ‘ಈದ್ ಉಲ್-ಅದಾ ಶುಭಾಶಯಗಳು. ಎಲ್ಲರಿಗೂ ಯಶಸ್ಸು ಮತ್ತು ಉತ್ತಮ ಆರೋಗ್ಯ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಸಮಾಜದಲ್ಲಿ ಸಹೋದರತ್ವ ಮತ್ತು ಸಂತೋಷದ ಮನೋಭಾವ ಮತ್ತಷ್ಟು ಗಟ್ಟಿಗೊಳ್ಳಲಿ’ ಎಂದು ಹೇಳಿದ್ದಾರೆ.
ಲೋಕಸಭಾ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ, ‘ಎಲ್ಲರಿಗೂ ಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯಗಳು. ಇಂದಿನ ಈ ದಿನ ನಿಮ್ಮ ಮನೆಯಲ್ಲಿ ಪ್ರೀತಿ, ಸೌಹಾರ್ದತೆ ಮತ್ತು ಸಂತೋಷ ತುಂಬಿರಲಿ’ ಎಂದು ಶುಭ ಕೋರಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ‘ಬಕ್ರೀದ್ ಹಬ್ಬವು ತ್ಯಾಗ, ನಂಬಿಕೆ, ಕರುಣೆ ಮತ್ತು ಕ್ಷಮಾಗುಣದ ಸಾರ್ವಕಾಲಿಕ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ಈ ಪವಿತ್ರ ಹಬ್ಬವು ನಮ್ಮಲ್ಲಿ ಸಹೋದರತ್ವದ ಮನೋಭಾವವನ್ನು ಮತ್ತಷ್ಟು ಗಟ್ಟಿಗೊಳಿಸಲು, ಏಕತೆಯ ಬಾಂಧವ್ಯವನ್ನು ಬಲಪಡಿಸಲು ಹಾಗೂ ಶಾಂತಿ, ಸೌಹಾರ್ದ ಸಮಾಜದ ನಿರ್ಮಾಣಕ್ಕಾಗಿ ಒಟ್ಟಾಗಿ ಕೆಲಸ ಮಾಡಲು ಸ್ಫೂರ್ತಿ ನೀಡಲಿ’ ಎಂದು ತಿಳಿಸಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರು ‘ಸಮಸ್ತ ಮುಸ್ಲಿಂ ಸಹೋದರ ಸಹೋದರಿಯರಿಗೆ ಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯಗಳು. ತ್ಯಾಗ, ಬಲಿದಾನ ಮತ್ತು ಭ್ರಾತೃತ್ವದ ಸಂಕೇತವಾದ ಈ ಪವಿತ್ರ ಹಬ್ಬವು ಎಲ್ಲರ ಬಾಳಿನಲ್ಲಿ ಸುಖ, ಶಾಂತಿ, ನೆಮ್ಮದಿ, ಮತ್ತು ಸಮೃದ್ಧಿಯನ್ನು ತರಲಿ ಎಂದು ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಬಕ್ರೀದ್ ಹಬ್ಬದ ಶುಭಾಶಯ ತಿಳಿಸಿದ್ದು,‘ತ್ಯಾಗ, ಬಲಿದಾನದ ಸಂಕೇತವಾದ ಈ ಪವಿತ್ರ ಹಬ್ಬವು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸಹೋದರತ್ವವು ನೆಲೆಗೊಳ್ಳಲು ಪ್ರೇರಣೆಯಾಗಲಿ’ ಎಂದಿದ್ದಾರೆ.