2026-06-08 02:43:51

Attack on Saudi Arabias Aramco oil company | ಸೌದಿ ಅರೇಬಿಯಾದ ಅರಾಮ್ಕೊ ತೈಲ ಸಂಸ್ಥೆ ಮೇಲೆ ದಾಳಿ ಪೂರೈಕೆಯಲ್ಲಿ ವ್ಯತ್ಯಯ | Speed News Kannada

Attack on Saudi Arabias Aramco oil company | ಸೌದಿ ಅರೇಬಿಯಾದ ಅರಾಮ್ಕೊ ತೈಲ ಸಂಸ್ಥೆ ಮೇಲೆ ದಾಳಿ ಪೂರೈಕೆಯಲ್ಲಿ ವ್ಯತ್ಯಯ | Speed News Kannada

ಸೌದಿ ಅರೇಬಿಯಾದ ಸರ್ಕಾರಿ ಸ್ವಾಮ್ಯದ ತೈಲ ದೈತ್ಯ ಸಂಸ್ಥೆ ಅರಾಮ್ಕೊ ಡ್ರೋನ್ ದಾಳಿಗೆ ಒಳಗಾದ ನಂತರ ತನ್ನ ರಾಸ್ ತನುರಾ ತೈಲ ಸಂಸ್ಕರಣಾಗಾರವನ್ನು ಮುಚ್ಚಿದೆ ಎಂದು ವರದಿಯಾಗಿದೆ.
ಅಮೆರಿಕ-ಇಸ್ರೇಲ್‌ನ ಜಂಟಿ ದಾಳಿಗೆ ಪ್ರತಿಯಾಗಿ ಇರಾನ್ ಗಲ್ಫ್ ರಾಷ್ಟ್ರಗಳ ಮೇಲೆ ನಡೆಸುತ್ತಿರುವ ಮೂರನೇ ದಿನದ ದಾಳಿಯ ಭಾಗವಾಗಿ ಈ ಘಟನೆ ನಡೆದಿದ್ದು, ಇದು ಪರಿಸ್ಥಿತಿಯ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ರಾಸ್ ತನುರಾ ಎಂಬುದು ಸೌದಿ ಅರೇಬಿಯಾದ ಸಮುದ್ರ ತೀರದಲ್ಲಿರುವ ಒಂದು ಬೃಹತ್ ತೈಲ ಕೇಂದ್ರ. ಇದು ಮಧ್ಯಪ್ರಾಚ್ಯದಲ್ಲೇ ಅತಿ ದೊಡ್ಡದಾದ ತೈಲ ಶುದ್ಧೀಕರಣ ಘಟಕಗಳಲ್ಲಿ ಒಂದಾಗಿದ್ದು, ಇಲ್ಲಿ ಪ್ರತಿದಿನ ಸುಮಾರು 5.5 ಲಕ್ಷ ಬ್ಯಾರೆಲ್‌ ಗಳಷ್ಟು ತೈಲವನ್ನು ಸಂಸ್ಕರಿಸಲಾಗುತ್ತದೆ. ಅಷ್ಟೇ ಅಲ್ಲದೆ, ಸೌದಿ ಅರೇಬಿಯಾದಿಂದ ಬೇರೆ ದೇಶಗಳಿಗೆ ಕಚ್ಚಾ ತೈಲವನ್ನು ಕಳುಹಿಸಲು ಇದು ಪ್ರಮುಖ ಮಾರ್ಗವಾಗಿದೆ.
ರಾಸ್ ತನುರಾ ತೈಲ ಕೇಂದ್ರವನ್ನು ಮುನ್ನೆಚ್ಚರಿಕೆ ಕ್ರಮವಾಗಿ ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ಸದ್ಯ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ವರದಿ ತಿಳಿಸಿದೆ. ಈ ಕೇಂದ್ರದ ಮೇಲೆ ದಾಳಿ ಮಾಡಲು ಬಂದಿದ್ದ ಎರಡು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಸೌದಿ ರಕ್ಷಣಾ ಸಚಿವಾಲಯದ ವಕ್ತಾರರು ಮಾಹಿತಿ ನೀಡಿದ್ದಾರೆ. ದಾಳಿ ಡ್ರೋನ್‌ಗಳ ಅವಶೇಷಗಳು ಬಿದ್ದಿದ್ದರಿಂದ ಸಣ್ಣ ಮಟ್ಟದ ಬೆಂಕಿ ಕಾಣಿಸಿಕೊಂಡಿತ್ತಾದರೂ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರಾಸ್ ತನುರಾ ತೈಲ ಕೇಂದ್ರವನ್ನು ಮುಚ್ಚಿರುವುದರಿಂದ ಜಾಗತಿಕ ಮಟ್ಟದಲ್ಲಿ ತೈಲ ಪೂರೈಕೆಯ ಕೊರತೆ ಉಂಟಾಗುವ ಸಾಧ್ಯತಗಳಿವೆ. ವಿಶ್ವದ ಒಟ್ಟು ತೈಲ ಬಳಕೆಯ ಸುಮಾರು ಐದನೇ ಒಂದು ಭಾಗದಷ್ಟು ಪೂರೈಕೆಯಾಗುವ ಹಾರ್ಮುಜ್ ಜಲಸಂಧಿಯ ಮೂಲಕ ಹಡಗುಗಳ ಸಂಚಾರವು ಬಹುತೇಕ ಸ್ಥಗಿತಗೊಂಡಿದೆ. ಈ ಭಾಗದಲ್ಲಿ ಹಡಗುಗಳ ಮೇಲೆ ದಾಳಿ ನಡೆದ ನಂತರ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಪರಿಣಾಮವಾಗಿ, ಸೋಮವಾರದಂದು ಬ್ರೆಂಟ್ ಕಚ್ಚಾ ತೈಲದ ಬೆಲೆಯು ಸರಿಸುಮಾರು 10% ರಷ್ಟು ಏರಿಕೆಯಾಗಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.