ಮುಂಬೈ: ಪಾಕಿಸ್ತಾನ ಮೂಲದ ಗ್ಯಾಂಗ್ ಸ್ಟರ್ ಗಳ ಜತೆ ಸಂಪರ್ಕ ಹೊಂದಿದ್ದಾರೆ ಎಂಬ ಶಂಕೆಯ ಮೇಲೆ ಮುಂಬೈಮ ಪುಣೆ ಮತ್ತು ನಾಗ್ಪುರ ಸೇರಿದಂತೆ 40ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದ್ದು, ಕನಿಷ್ಠ 40 ಮಂದಿ ಶಂಕಿತರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ ತಿಳಿಸಿದೆ.
ಪಾಕಿಸ್ತಾನದಲ್ಲಿ ನೆಲೆಸಿರುವ ಭೂಗತ ಪಾತಕಿ ಶಹಜಾದ್ ಭಟ್ಟಿ ಮತ್ತು ಆತನ ಗ್ಯಾಂಗ್ ಜತೆ ಮಹಾರಾಷ್ಟ್ರದ ಕೆಲವು ವ್ಯಕ್ತಿಗಳು ನಿರಂತರ ಸಂಪರ್ಕದಲ್ಲಿದ್ದಾರೆ ಎಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಇಂದು ನಸುಕಿನಲ್ಲಿ ಆರಂಭವಾದ ಮುಂಬೈ, ನಾಗ್ಪುರ, ನಾಸಿಕ್, ಅಕೋಲಾ, ನಾಂದೇಡ್, ಪುಣೆ, ಥಾಣೆ ಜಿಲ್ಲೆಯ ಮೀರಾ ರೋಡ್, ಪಾಲ್ಘರ್‌ನ ನಲಸೋಪಾರಾ, ಜಲಗಾಂವ್ ಮತ್ತು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಈ ದಾಳಿ ನಡೆದಿದೆ. ದಾಳಿ ವೇಳೆ ಮಹತ್ವದ ದಾಖಲೆಗಳು ಮತ್ತು ಡಿಜಿಟಲ್ ಪುರಾವೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ವಿದೇಶದಲ್ಲಿ ಕುಳಿತು ಗ್ಯಾಂಗ್ ಮುನ್ನೆಡೆಸುತ್ತಿರುವ ಶಹಜಾದ್ ಭಟ್ಟಿ, ಭಾರತದ ಯುವಕರನ್ನು ಅಕ್ರಮ ಚಟುವಟಿಕೆಗಳಿಗೆ ಪ್ರಚೋದಿಸಲು ಯತ್ನಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಎಟಿಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.