ಚಿತ್ರದುರ್ಗ: ವಿದ್ಯಾಬುದ್ಧಿ ಕಲಿಸಿ ಮಕ್ಕಳ ಭವಿಷ್ಯ ರೂಪಿಸಬೇಕಾದ ಶಿಕ್ಷಕನೇ ಕಾಮಪಿಶಾಚಿಯಾಗಿ ವರ್ತಿಸಿರುವ ಆಘಾತಕಾರಿ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ ಬೆಳಕಿಗೆ ಬಂದಿದೆ. ಶಾಲೆಯಲ್ಲೇ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆಕೆ ಗರ್ಭಿಣಿಯಾಗಲು ಕಾರಣವಾದ ಗಣಿತ ಶಿಕ್ಷಕ ಹಾಗೂ ಈ ವಿಷಯವನ್ನು ಮುಚ್ಚಿಹಾಕಲು ಅಕ್ರಮವಾಗಿ ಗರ್ಭಪಾತ ಮಾಡಿಸಿದ ವೈದ್ಯೆಯ ವಿರುದ್ಧ ಈಗ ಪೋಕ್ಸ್ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಚಳ್ಳಕೆರೆ ವ್ಯಾಪ್ತಿಯ ಹಿರಿಯ ಪ್ರಾಥಮಿಕ ಶಾಲೆಯ ಗಣಿತ ಶಿಕ್ಷಕ ಹೆಚ್.ಓ. ರಾಜಣ್ಣ ಎಂಬಾತನೇ ಈ ನೀಚ ಕೃತ್ಯವೆಸಗಿದ ಆರೋಪಿ. ಈತ ಶಾಲಾ ಕೊಠಡಿಯೊಳಗೆ ವಿದ್ಯಾರ್ಥಿನಿಯ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದ ಎನ್ನಲಾಗಿದೆ. ಇದರ ಪರಿಣಾಮವಾಗಿ 16 ವರ್ಷದ ಅಪ್ರಾಪ್ತ ಬಾಲಕಿ ಗರ್ಭ ಧರಿಸಿದ್ದಳು. ವಿಷಯ ಪೋಷಕರಿಗೆ ಅಥವಾ ಸಾರ್ವಜನಿಕರಿಗೆ ತಿಳಿದರೆ ಸಂಕಷ್ಟಕ್ಕೆ ಸಿಲುಕಬಹುದು ಎಂದು ಹೆದರಿದ ಶಿಕ್ಷಕ, ಹೇಗಾದರೂ ಮಾಡಿ ಪ್ರಕರಣವನ್ನು ಮುಚ್ಚಿಹಾಕಲು ಸಂಚು ರೂಪಿಸಿದ್ದನು.
ತನ್ನ ಪ್ಲಾನ್‌ನಂತೆ ಚಳ್ಳಕೆರೆಯ ಲಕ್ಷ್ಮೀ ಶ್ರೀನಿವಾಸ ನರ್ಸಿಂಗ್ ಹೋಮ್‌ನ ವೈದ್ಯ ಶಂಕರಲಕ್ಷ್ಮೀ ಎಂಬುವವರನ್ನು ಸಂಪರ್ಕಿಸಿದ ಶಿಕ್ಷಕ, ಬಾಲಕಿಗೆ ಅಕ್ರಮವಾಗಿ ಗರ್ಭಪಾತ ಮಾಡಿಸಿದ್ದಾನೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಆದರೆ ಈ ವಿಷಯವು ತಡವಾಗಿ ಮಕ್ಕಳ ರಕ್ಷಣಾಧಿಕಾರಿಗಳ ಗಮನಕ್ಕೆ ಬಂದಿದ್ದು, ಅಧಿಕಾರಿ ರೇಖಾ ಅವರು ನೀಡಿದ ದೂರಿನನ್ವಯ ಚಳ್ಳಕೆರೆ ತಳಕು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸದ್ಯ ಪೊಲೀಸರು ಕಾಮುಕ ಶಿಕ್ಷಕ ರಾಜಣ್ಣ ಹಾಗೂ ಆತನಿಗೆ ಸಾಥ್ ನೀಡಿದ ವೈದ್ಯ ಶಂಕರಲಕ್ಷ್ಮೀ ವಿರುದ್ಧ ಪೋಕ್ಸ್ ಕಾಯ್ದೆಯಡಿ ಕೇಸ್ ದಾಖಲಿಸಿಕೊಂಡು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಶಾಲೆಯ ಆವರಣದಲ್ಲೇ ವಿದ್ಯಾರ್ಥಿನಿಯ ಮೇಲೆ ಇಂತಹ ದೌರ್ಜನ್ಯ ನಡೆದಿರುವುದು ಪೋಷಕರಲ್ಲಿ ಭೀತಿ ಮೂಡಿಸಿದ್ದು, ಜಿಲ್ಲೆಯಾದ್ಯಂತ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಗುವಿನಂತೆ ನೋಡಿಕೊಳ್ಳಬೇಕಾದ ಶಿಕ್ಷಕನೇ ಈ ರೀತಿ ನಡೆದುಕೊಂಡಿರುವುದು ಸಮಾಜ ತಲೆತಗ್ಗಿಸುವಂತಿದೆ.