2026-06-08 07:45:36

All those who wrote the exam in the same room passed | ಕೆಎಎಸ್‌ ಪರೀಕ್ಷೆ ಗೋಲ್‌ ಮಾಲ್ ಒಂದೇ ರೂಂನಲ್ಲಿ ಪರೀಕ್ಷೆ ಬರೆದವರೆಲ್ಲಾ ಪಾಸ್ | Speed News Kannada

All those who wrote the exam in the same room passed | ಕೆಎಎಸ್‌ ಪರೀಕ್ಷೆ ಗೋಲ್‌ ಮಾಲ್ ಒಂದೇ ರೂಂನಲ್ಲಿ ಪರೀಕ್ಷೆ ಬರೆದವರೆಲ್ಲಾ ಪಾಸ್ | Speed News Kannada

ಬೆಂಗಳೂರು: ಖ್ಯಾತಿಗಿಂತಲೂ ಕುಖ್ಯಾತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌‍ಸಿ) ಮನೆಮಾತಾಗಿದೆ. ಇದೀಗ ಕೆಎಎಸ್‌‍ ನೇಮಕಾತಿಗೆ ನಡೆಸಿದ ಮುಖ್ಯ ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂದು ಆರೋಪಿಸಲಾಗುತ್ತಿದೆ.
ಮುಖ್ಯ ಪರೀಕ್ಷೆ ಬರೆದಿದ್ದ ಅನೇಕ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು, ಸಿಬಿಐ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಕೂಡಲೇ ಪ್ರಧಾನಿ ಮೋದಿ ಅವರು ಮಧ್ಯಪ್ರವೇಶಿಸಿ ನ್ಯಾಯ ಒದಗಿಸಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ.
ಕೆಎಎಸ್‌‍ ಮುಖ್ಯ ಪರೀಕ್ಷೆಯಲ್ಲಿ ಒಂದೇ ಕೊಠಡಿಯಲ್ಲಿ ಪರೀಕ್ಷೆ ಬರೆದ 15 ಮಂದಿ ಆಯ್ಕೆಯಾಗಿದ್ದಾರೆ ಎನ್ನುವುದು ಇವರ ಆರೋಪ. ನಾವೂ ಚೆನ್ನಾಗಿಯೇ ಪರೀಕ್ಷೆ ಬರೆದಿದ್ದೇವೆ. ಆದರೆ ಆಯ್ಕೆ ಆಗಿಲ್ಲ. ಫಲಿತಾಂಶದಲ್ಲಿ ಗೋಲ್‌ ಮಾಲ್‌ ನಡೆದಿದೆ ಎಂದು ಆರೋಪ ಮಾಡುತ್ತಿದ್ದಾರೆ.
2023-24ನೇ ಸಾಲಿನಲ್ಲಿ 384 ಗ್ರೂಪ್‌ ಎ ಮತ್ತು ಬಿ ಹುದ್ದೆಗಳ ನೇಮಕಕ್ಕೆ ಕೆಪಿಎಸ್‌‍ಸಿ  ಫೆ.26ರಂದು ಅಧಿಸೂಚನೆ ಹೊರಡಿಸಿತ್ತು. ಮೊದಲಿಗೆ ಆಗಸ್ಟ್‌ 2024ರಲ್ಲಿ ನಡೆದ ಪ್ರಾಥಮಿಕ ಪರೀಕ್ಷೆಯ ಪ್ರಶ್ನೆಪತ್ರಿಕೆಯ ಅನುವಾದದಲ್ಲಿ ಪ್ರಮಾದ ಉಂಟಾಗಿ ಸರ್ಕಾರ ಪೂರ್ವಭಾವಿ ಪರೀಕ್ಷೆ ರದ್ದುಗೊಳಿಸಿ 2024ರ ಡಿ.29ಕ್ಕೆ ಮರು ಪರೀಕ್ಷೆ ನಡೆಸಿತ್ತು. ಆಗಲೂ ಅನೇಕ ಎಡವಟ್ಟುಗಳಾಗಿದ್ದವು.
ಬಳಿಕ 2025ರ ಮೇ 3, 5, 7 ಮತ್ತು 9ರಂದು ಮುಖ್ಯ ಪರೀಕ್ಷೆಗಳು ನಡೆದಿದ್ದವು. ಈಗ ಆಯೋಗ ಮುಖ್ಯ ಪರೀಕ್ಷಾ ಫಲಿತಾಂಶ ಪ್ರಕಟಿಸಿ 1:3 ಅನುಪಾತದಲ್ಲಿ ಅಭ್ಯರ್ಥಿಗಳನ್ನು ವ್ಯಕ್ತಿತ್ವ ಪರೀಕ್ಷೆಗೆ ಆಯ್ಕೆ ಮಾಡಿದೆ. ಸದ್ಯ ಈ ಆಯ್ಕೆ ಪಟ್ಟಿ ಸಾಕಷ್ಟು ಗೊಂದಲ ಉಂಟುಮಾಡಿದೆ. ಕರ್ನಾಟಕ ಲೋಕ ಸೇವಾ ಆಯೋಗದ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಖಿಲ ಭಾರತ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಾಂತಕುಮಾರ ಮಾತನಾಡಿ ಒಂದೇ ಕೊಠಡಿಯಲ್ಲಿ ಪರೀಕ್ಷೆ ಬರೆದ 15 ಮಂದಿ ಆಯ್ಕೆ ಆಗಿದ್ದಾರೆ. ಇವರೆಲ್ಲರ ಸೀರಿಯಲ್‌ ನಂಬರ್‌ ಸಾಲಾಗಿದೆ.  ಒಂದೇ ಕುಟುಂಬದ ಇಬ್ಬರು-ಮೂವರೂ ಆಯ್ಕೆ ಆಗಿದ್ದಾರೆ. ಪ್ರಾಮಾಣಿಕವಾಗಿ ಓದಿದವರಿಗೆ ಕೆಲಸ ಸಿಗಬೇಕು. ಸೂಕ್ತ ತನಿಖೆ ನಡೆಸಬೇಕು ಇಲ್ಲವೇ ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ಭಾಸ್ಕರ್‌ ರಾವ್‌ ಬೆಂಬಲ: 
ನಿವೃತ್ತ ಐಪಿಎಸ್‌‍ ಅಧಿಕಾರಿ ಹಾಗೂ ಬಿಜೆಪಿ ಮುಖಂಡ ಭಾಸ್ಕರ್‌ ರಾವ್‌  ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತಿದ್ದಾರೆ. ಅಧಿಕಾರಿಗಳನ್ನು ನೇಮಿಸುವ ಜವಾಬ್ದಾರಿಯುತ ರಾಜ್ಯದ ಪ್ರಮುಖ ಸಂಸ್ಥೆಯೇ ವಂಚನೆ ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯ ಆರೋಪ ಎದುರಿಸಿದರೆ, ಸಾರ್ವಜನಿಕರು ಸಂಪೂರ್ಣವಾಗಿ ನಂಬಿಕೆ ಕಳೆದುಕೊಳ್ಳುತ್ತಾರೆ ಎಂದಿದ್ದಾರೆ.
ವ್ಯವಸ್ಥೆಯಲ್ಲೇ ದೊಡ್ಡದೊಡ್ಡ ದೋಷಗಳಿವೆ. ಸರ್ಕಾರ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು. ಪಾರದರ್ಶಕ ಮತ್ತು ಸುರಕ್ಷಿತ ವ್ಯವಸ್ಥೆ ತರಬೇಕು. ಯುಪಿಎಸ್‌‍ಸಿ ಮಾದರಿಯಲ್ಲಿ ತಂತ್ರಜ್ಞಾನ ಆಧಾರಿತ ಭದ್ರತೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.