ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಹದಗೆಟ್ಟಿದ್ದ ವಾಯು ಗುಣಮಟ್ಟದಲ್ಲಿ ಇಂದು ಸ್ವಲ್ಪ ಮಟ್ಟಿಗೆ ಸುಧಾರಣೆ ಕಂಡುಬಂದಿದೆ. ಆದರೆ ಪರಿಸ್ಥಿತಿ ಇನ್ನೂ ಸಂಪೂರ್ಣವಾಗಿ ಸುರಕ್ಷಿತವಾಗಿಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ.ಬೆಂಗಳೂರು ಸೇರಿದಂತೆ ಬಳ್ಳಾರಿ ಮತ್ತು ಮಂಗಳೂರು ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ವಾಯು ಗುಣಮಟ್ಟ ತೀವ್ರವಾಗಿ ಹದಗೆಟ್ಟಿತ್ತು.
ಇಂದು ಉಡುಪಿ ಹಾಗೂ ಮಂಗಳೂರಿನಲ್ಲಿ ವಾಯು ಗುಣಮಟ್ಟದಲ್ಲಿ ಸ್ವಲ್ಪ ಮಟ್ಟಿನ ಸುಧಾರಣೆ ಕಂಡುಬಂದಿದ್ದು, ಜನರು ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.ಕೆಲ ದಿನಗಳ ಹಿಂದೆ ತೀವ್ರ ಕಳಪೆ ಮಟ್ಟಕ್ಕಿಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂಡೆಕ್ಸ್ ಈಗ 134ಕ್ಕೆ ಏರಿಕೆಯಾಗಿದೆ. ಆದರೂ ಈ ಮಟ್ಟ ಇನ್ನೂ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.
ತಜ್ಞರ ಪ್ರಕಾರ, ಅಂಕೆಗಳಲ್ಲಿ ಸಣ್ಣ ಮಟ್ಟಿನ ಸುಧಾರಣೆ ಕಂಡರೂ ವಿಶ್ವ ಆರೋಗ್ಯ ಸಂಸ್ಥೆ ಮಾನದಂಡಗಳ ಪ್ರಕಾರ ಗಾಳಿಯ ಗುಣಮಟ್ಟ ಇನ್ನೂ ಅಪಾಯಕರವಾಗಿದೆ. ಹೀಗಾಗಿ, ವಾಯು ಗುಣಮಟ್ಟದಲ್ಲಿ ಸುಧಾರಣೆ ಕಂಡರೂ ಸಾರ್ವಜನಿಕರು ಎಚ್ಚರಿಕೆ ವಹಿಸುವುದು ಅಗತ್ಯ. ವಿಶೇಷವಾಗಿ ಮಕ್ಕಳು, ವೃದ್ಧರು ಹಾಗೂ ಶ್ವಾಸಕೋಶ ಸಮಸ್ಯೆ ಇರುವವರು ಹೆಚ್ಚಾಗಿ ಜಾಗ್ರತೆ ವಹಿಸಬೇಕು.