ಚಂದನವನದ ನಟಿ ಹರ್ಷಿಕಾ ಪೂಣಚ್ಚ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ರೆಟ್ರೊ ಶೈಲಿಯಲ್ಲಿ ಬೇಬಿ ಬಂಪ್ ಫೋಟೊ ಶೂಟ್ ಮಾಡಿಸಿಕೊಂಡಿರುವ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.ಮೊದಲ ಮಗುವಿನ ತಾಯಿಯಾಗುವ ಸಂದರ್ಭದಲ್ಲಿಯೂ ಹರ್ಷಿಕಾ, ರವಿವರ್ಮಾ ಅವರ ಚಿತ್ರಕಲೆಯಿಂದ ಪ್ರೇರಿತರಾಗಿ ಫೋಟೊಶೂಟ್ ಮಾಡಿಸಿದ್ದರು. ಈ ಬಾರಿ 70ರ ದಶಕದ ಮಹಿಳೆಯಂತೆ ಕಾಣಿಸಿಕೊಂಡಿದ್ದಾರೆ. ತಮ್ಮ ವಿಭಿನ್ನ ಫೋಟೊಶೂಟ್ ಬಗ್ಗೆ 'ಪ್ರಜಾವಾಣಿ ಡಿಜಿಟಲ್' ಜತೆಗೆ ಮಾತನಾಡಿರುವ ಹರ್ಷಿಕಾ, 'ನಮ್ಮ ಫೋಟೊಗ್ರಾಫರ್ ಸುಪ್ರಿಯಾ ಅವರು ಹಳೆ ಹೀರೋಯಿನ್ ರೀತಿಯಲ್ಲಿ ಶೂಟ್ ಮಾಡೋಣ ಎಂದು ಯೋಜನೆ ರೂಪಿಸಿದ್ದರು. ಇದು ಒಳ್ಳೆಯ ಯೋಚನೆ ಎಂದು ನನಗೂ ಅನಿಸಿತ್ತು. ಆದರೆ ರೆಟ್ರೊ ಎಂದಾಕ್ಷಣ ನೆನಪಾಗುವುದು ಮುಡಿ ಕಟ್ಟಿದ ಕೂದಲಿನ ಕೇಶವಿನ್ಯಾಸ. ಆದರೆ ಆ ರೀತಿ ಬೇಡ, ಸ್ವಲ್ಪ ಆಧುನಿಕವಾಗಿರಲಿ ಎಂದು ಯೋಚಿಸಿದ್ದೆವು' ಎಂದಿದ್ದಾರೆ.
ಹಾಲಿವುಡ್ ಬೆಡಗಿಯ ಕೇಶವಿನ್ಯಾಸ ಹಾಲಿವುಡ್‌ನ ಸೂಪರ್‌ಸ್ಟಾರ್ ಮರ್ಲಿನ್ ಮಾನ್ರೋ ಅವರ ಕೇಶ ವಿನ್ಯಾಸ ಬಹಳ ಆಕರ್ಷಿಸಿತ್ತು. ಹೀಗಾಗಿ ಅವರದ್ದೇ ಕೇಶವಿನ್ಯಾಸವನ್ನು ಆಧರಿಸಿ, ರೆಟ್ರೊ ಲುಕ್‌ನಲ್ಲಿ ಸ್ವಲ್ಪ ಬದಲಾವಣೆ ಮಾಡೋಣವೆಂದು ನಿರ್ಧರಿಸಿದ್ದೆವು. ಮರ್ಲಿನ್ ಮಾನ್ರೊ ಸೀರೆಯುಟ್ಟರೆ ಹೇಗಿರುತ್ತೆ ಎನ್ನುವ ಕಲ್ಪನೆ ಮೂಡಿತ್ತು. ಅದರಂತೆ ಕೇಶವಿನ್ಯಾಸ ಮಾಡಿ, ಸೀರೆಯನ್ನು ರೆಟ್ರೋ ಶೈಲಿಯಲ್ಲಿ ಉಟ್ಟು ಫೋಟೊಶೂಟ್ ಮಾಡಲಾಗಿದೆ. ಹಳೆಯ ಹಾಡಿನ ಬಗ್ಗೆ ಯೋಚಿಸಿದಾಗ ನೆನಪಿಗೆ ಬಂದಿದ್ದು, ಆರತಿ ಮತ್ತು ಡಾ.ರಾಜ್‌ಕುಮಾರ್ ಅವರ 'ನೀ ಬಂದು ನಿಂತಾಗ...' ಹಾಡು. ಅದನ್ನೇ ರೀಕ್ರಿಯೇಟ್ ಮಾಡಿದ್ದೇವೆ. ಕಳೆದ ಬಾರಿಯಂತೆ ಈ ಬಾರಿಯೂ ನಮ್ಮ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆಯಿದೆ. ಅದಕ್ಕೆ ಖುಷಿ ಇದೆ' ಎಂದಿದ್ದಾರೆ. ಕೊಡಗು ಮೂಲದ ಹರ್ಷಿಕಾ ಮತ್ತು ಭುವನ್ ಜೋಡಿ 2023 ಆಗಸ್ಟ್ 24ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿ 2024ರಲ್ಲಿ ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದರು. ಮಗಳ ನಾಮಕರಣವನ್ನು ಅದ್ದೂರಿಯಾಗಿ ಮಾಡಿದ್ದ ಹರ್ಷಿಕಾ ಮತ್ತು ಭುವನ್ ತ್ರಿದೇವಿ ಪೊನ್ನಕ್ಕ ಎಂದು ಹೆಸರಿಟ್ಟಿದ್ದರು. ಇತ್ತೀಚೆಗೆ ಪ್ಯಾರಿಸ್‌ನಲ್ಲಿರುವ ಐಫೆಲ್ ಟವರ್ ಬಳಿ ನಿಂತು ಎರಡನೇ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಘೋಷಿಸಿದ್ದರು.