ದೆಹಲಿ: ಬಾಲಿವುಡ್ ನಲ್ಲಿ ಸಿನಿಮಾಗಳಿಗಿಂತ ಚೆಕ್ ಬೌನ್ಸ್ ಪ್ರಕರಣಗಳೇ ಹೆಚ್ಚು ಸದ್ದು ಮಾಡುತ್ತಿವೆ. ನಿನ್ನೆಯಷ್ಟೇ ಚೆಕ್ ಬೌನ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ಹಾಸ್ಯ ನಟ ರಾಜ್‌ಪಾಲ್ ಯಾದವ್ ಗೆ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದೆ. ಇದೀಗ ಖ್ಯಾತ ನಟಿ ಅಮೀಶಾ ಪಟೇಲ್ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ಕೇಳಿಬಂದಿದ್ದು, ಮೊರಾದಾಬಾದ್ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿದೆ.
ನ್ಯಾಯಾಲಯ ವಾರಂಟ್ ಹೊರಡಿಸಿದ ಸುದ್ದಿ ವೈರಲ್ ಆಗುತ್ತಿದ್ದಂತೆ ಅಮೀಶಾ ಅವರು, ಇನ್‌ಸ್ಟಾಗ್ರಾಂನಲ್ಲಿ ಇದು ಹಳೆಯ ಪ್ರಕರಣವಾಗಿದ್ದು, ಈಗಾಗಲೇ ಇತ್ಯರ್ಥಗೊಂಡಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಅಮೀಷಾ ಪಟೇಲ್ ಅವರೂ ಜೈಲು ಸೇರಲಿದ್ದಾರೆ ಎಂಬ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿವೆ.
ಅಮೀಶಾ ವಿರುದ್ಧ ಮೊರಾದಾಬಾದ್‌ನ ಇವೆಂಟ್ ಮ್ಯಾನೇಜರ್ ಪವನ್ ವರ್ಮಾ ಎನ್ನುವವರು ಚೆಕ್‌ಬೌನ್ಸ್ ಪ್ರಕರಣ ದಾಖಲಿಸಿದ್ದಾರೆ.
ಪವನ್ ವರ್ಮಾ ನೀಡಿರುವ ದೂರಿನ ಪ್ರಕಾರ, 2017ರ ನವೆಂಬರ್ 16ರಂದು ವಿವಾಹ ಕಾರ್ಯಕ್ರಮದಲ್ಲಿ ಅಮಿಶಾ ಭಾಗವಹಿಸಬೇಕಿತ್ತು. ಇದಕ್ಕಾಗಿ ಅಮೀಶಾ ಅವರಿಗೆ ರೂ.14.50 ಲಕ್ಷ ನೀಡಲು ಪವನ್ ವರ್ಮಾ ಒಪ್ಪಿಕೊಂಡು ಹಣ ನೀಡಿದ್ದರು. ಆದರೆ ಅಮೀಶಾ ಅವರು ನವೆಂಬರ್ 16ರಂದು ಮೊರಾದಾಬಾದ್‌ಗೆ ಆಗಮಿಸಿರಲಿಲ್ಲ. ಕೊಟ್ಟ ಹಣವನ್ನು ಮರಳಿಸುವುದಾಗಿ ಹೇಳಿ ರೂ.10 ಲಕ್ಷ ನಗದು ಮತ್ತು ರೂ.4.50 ಲಕ್ಷದ ಚೆಕ್ ನೀಡಿದ್ದರು. ಆದರೆ ಚೆಕ್ ಬೌನ್ಸ್ ಆಗಿದೆ. ಹೀಗಾಗಿ ಪವನ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಮೊರಾದಾಬಾದ್ ಕೋರ್ಟ್‌ನಿಂದ ಹಲವು ಬಾರಿ ಅಮೀಶಾ ಅವರಿಗೆ ಸಮನ್ಸ್ ನೀಡಿದರೂ ವಿಚಾರಣೆಗೆ ಹಾಜರಾಗದ ಕಾರಣ ಈಗ ಜಾಮೀನು ರಹಿತ ವಾರಂಟ್ ನೀಡಲಾಗಿದೆ.
ಮೊರಾದಾಬಾದ್‌ನಲ್ಲಿ ಪವನ್ ವರ್ಮಾ ಎಂಬುವವರು ದಾಖಲಿಸಿದ ಪ್ರಕರಣದ ಬಗ್ಗೆ ಮಾಧ್ಯಮ ವರದಿಗಳು ಮಾಡಿವೆ. ಇದು ವರ್ಷಗಳ ಹಿಂದೆ ನಡೆದ ಹಳೆಯ ಪ್ರಕರಣವಾಗಿದ್ದು, ಪವನ್ ವರ್ಮಾ ಅವರು ಇತ್ಯರ್ಥ ಪತ್ರಕ್ಕೆ ಸಹಿ ಹಾಕಿದ್ದರು. ಒಪ್ಪಿಕೊಂಡ ಮೊತ್ತವನ್ನು ಸಂಪೂರ್ಣವಾಗಿ ಪಡೆದಿದ್ದರು. ಇದರ ಹೊರತಾಗಿಯೂ ಅವರು ಸುಳ್ಳು ಆರೋಪಗಳನ್ನು ಹೊರಿಸಿ ಪ್ರಕರಣ ದಾಖಲಿಸಿದ್ದಾರೆ. ನನ್ನ ವಕೀಲರು ಈ ವ್ಯಕ್ತಿಯ ಸುಳ್ಳುಗಳನ್ನು ಬಹಿರಂಗಪಡಿಸುತ್ತಾರೆ. ನನ್ನ ವಿರುದ್ಧ ಸುಳ್ಳು ಆರೋಪ ಮಾಡುವವರ ಮಾತುಗಳನ್ನು ನಿರ್ಲಕ್ಷಿಸಿ ಎಂದು ಕೇಳಿಕೊಳ್ಳುತ್ತೇನೆ’ ಎಂದಿದ್ದಾರೆ.