ಅಮೆರಿಕದ ರಾಜಧಾನಿ ವಾಷಿಂಗ್ಟನ್‌ನಲ್ಲಿ ನಡೆಯಲಿದ್ದ ಶ್ವೇತಭವನದ ವರದಿಗಾರರ ಭೋಜನಕೂಟದಲ್ಲಿ ಭೀಕರ ಹತ್ಯಾಕಾಂಡವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಸುಮಾರು 2,500ಕ್ಕೂ ಹೆಚ್ಚು ಗಣ್ಯರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಆರೋಪಿಯನ್ನು ಭದ್ರತಾ ಪಡೆಗಳು ಬಂಧಿಸಿವೆ.
ಕ್ಯಾಲಿಫೋರ್ನಿಯಾದ 31 ವರ್ಷದ ಕೋಲ್ ಥಾಮಸ್ ಅಲೆನ್ ಎಂಬಾತನೇ ಈ ಸಂಚಿನ ರೂವಾರಿ. ಘಟನೆಗೂ ಕೇವಲ 10 ನಿಮಿಷಗಳ ಮೊದಲು, ಆರೋಪಿ ತನ್ನ ಕುಟುಂಬಕ್ಕೆ 'ಟ್ರಂಪ್ ವಿರೋಧಿ ಪ್ರಣಾಳಿಕೆ' ಎಂಬ ದಾಖಲೆಯನ್ನು ಕಳುಹಿಸಿದ್ದನು. ಇದರಲ್ಲಿ ಅಧ್ಯಕ್ಷರು ಮತ್ತು ಸರ್ಕಾರದ ಉನ್ನತ ಅಧಿಕಾರಿಗಳನ್ನು ಹತ್ಯೆ ಮಾಡುವ ಪಟ್ಟಿಯನ್ನು ಆತ ಸಿದ್ಧಪಡಿಸಿದ್ದನು. ಈ ದಾಖಲೆಯನ್ನು ಗಮನಿಸಿದ ಆರೋಪಿಯ ಸಹೋದರ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ದೊಡ್ಡ ಅನಾಹುತ ತಪ್ಪಿದೆ.ಆರೋಪಿ ಅಲೆನ್, ಶಸ್ತ್ರಾಸ್ತ್ರಗಳೊಂದಿಗೆ ವಾಷಿಂಗ್ಟನ್ ಹಿಲ್ಟನ್ ಹೋಟೆಲ್ ಪ್ರವೇಶಿಸಿದ್ದರೂ, ಭದ್ರತಾ ವೈಫಲ್ಯವನ್ನು ಲೇವಡಿ ಮಾಡಿದ್ದನು. ಭದ್ರತಾ ಸಿಬ್ಬಂದಿಯ ಗಮನವೆಲ್ಲ ಹೊರಗಿನ ಪ್ರತಿಭಟನಾಕಾರರ ಮೇಲಿದ್ದಾಗ, ತಾನು ಸುಲಭವಾಗಿ ಒಳನುಸುಳಿದ್ದಾಗಿ ಆತ ತಿಳಿಸಿದ್ದನು.
ಆದರೆ, ಕನೆಕ್ಟಿಕಟ್ ಪೊಲೀಸರಿಗೆ ದೊರೆತ ಮಾಹಿತಿ ಆಧರಿಸಿ ಸಕ್ರಿಯಗೊಂಡ ಸೀಕ್ರೆಟ್ ಸರ್ವಿಸ್, ಅಧ್ಯಕ್ಷರು ಕುಳಿತಿದ್ದ ಬಾಲ್ ರೂಂ ತಲುಪುವ ಮುನ್ನವೇ ಅಲೆನ್‌ನನ್ನು ಸೆರೆಹಿಡಿದಿದೆ. ಒಬ್ಬ ವ್ಯಕ್ತಿಯ ಕ್ರೂರ ಮನಸ್ಥಿತಿಯ ಫಲವಾಗಬೇಕಿದ್ದ ಈ ಭೀಕರ ಸಂಚು, ಸಮಯಕ್ಕೆ ಸರಿಯಾದ ಎಚ್ಚರಿಕೆಯಿಂದ ವಿಫಲವಾಗಿದೆ. ಈ ಘಟನೆಯು ಅಮೆರಿಕದ ಉನ್ನತ ನಾಯಕತ್ವದ ಭದ್ರತಾ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ದೊಡ್ಡ ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿದೆ.