ಇಂದೋರ್: ಮಧ್ಯಪ್ರದೇಶದಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಯುತ್ತಿದೆ. ಭವಿಷ್ಯದ ದೃಷ್ಟಿಯಿಂದ 10ನೇ ತರಗತಿ ಅಂಕಗಳು ಅತ್ಯಂತ ಮಹತ್ವ ಪಡೆದುಕೊಂಡಿದೆ.
ಇಂದು 10ನೇ ತರಗತಿಯ ಗಣಿತ ಪರೀಕ್ಷೆ. ಗಣಿತ ಅಂದ್ರೆ ಸಹಜವಾಗಿ ಭಯ ಇದ್ದೇ ಇರುತ್ತದೆ. ಭಯದ ನಡುವೆಯೇ ಪರೀಕ್ಷೆ ಬರೆಯಲು ಎಲ್ಲರೂ ಕುಳಿತಿದ್ದಾರೆ, ಈ ವಿದ್ಯಾರ್ಥಿನಿಯ ಮುಖದಲ್ಲೂ ಆ ಭಯ ಆವರಿಸಿದೆ. ಉತ್ತರ ಬರೆಯುವ ವೇಳೆ ವಿದ್ಯಾರ್ಥಿನಿಗೆ ಅಸ್ವಸ್ಥತೆ ಕಾಡಿದೆ. ಮೇಲ್ವಿಚಾರಕರಲ್ಲಿ ಮನವಿ ಮಾಡಿ ವಾಶ್‌ರೂಂಗೆ ತೆರಳಿದ್ದಾಳೆ. ಈ ವಿದ್ಯಾರ್ಥಿನಿ ಬಾತ್‌ರೂಂನಲ್ಲೇ ಗಂಡು ಮಗುವಿಗೆ ಜನ್ಮನೀಡಿದ್ದಾಳೆ. ಈ ಘಟನೆ ಮಧ್ಯಪ್ರದೇಶ ಧಾರ್ ಜಿಲ್ಲೆಯಲ್ಲಿ ನಡೆದಿದೆ.
ಬಾತ್‌ರೂಂನಿಂದ ಕೇಳಿಬಂತು ಮಗು ಅಳುವ ಶಬ್ದ:
ವಾಶ್‌ರೂಂಗೆ ತೆರಳಿದ ಕೆಲ ಹೊತ್ತಲ್ಲೇ ಮಗುವಿನ ಅಳುವ ಶಬ್ದ ಕೇಳಿಸಿದೆ. ವಿದ್ಯಾರ್ಥಿನಿಗೂ ಭಯ ಕಾಡಿದೆ. ಮಗುವಿನ ಜತೆಗೆ ಆಕೆಯೂ ಅಳಲು ಆರಂಭಿಸಿದ್ದಾಳೆ. ಮಗುವಿನ ಶಬ್ದ ಕೇಳಿ ಮೇಲ್ವಿಚಾಕರೂ ವಾಶ್‌ರೂಂಗೆ ಓಡಿ ಬಂದಿದ್ದಾರೆ. ಈ ವೇಳೆ ವಿದ್ಯಾರ್ಥಿನಿ ತೀವ್ರ ಅಸ್ವಸ್ಥಗೊಂಡಿದ್ದರೆ, ಪಕ್ಕದಲ್ಲೇ ನವಜಾತ ಮಗು ಅಳುತ್ತಿದೆ.
ತಕ್ಷಣವೇ ಶಿಕ್ಷಕರು ಆ್ಯಂಬುಲೆನ್ಸ್ ಮೂಲಕ ತಾಯಿ ಮಗುವನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಮಗುವಿನ ತೂಕ 2 ಕೆಜಿ ಇದ್ದು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಪೋಷಕರು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಮಗಳ ಈ ಸ್ಥಿತಿ ಬಗ್ಗೆ ನಮಗೆ ಗೊತ್ತಿರಲಿಲ್ಲ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.
ಪೊಲೀಸರು ವಿದ್ಯಾರ್ಥಿನಿಯಿಂದ ಮಾಹಿತಿ ಪಡೆಯುತ್ತಿದ್ದು, ಪರಿಸ್ಥಿತಿಗೆ ಕಾರಣ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ವಿದ್ಯಾರ್ಥಿನಿಗೆ ಈಗಾಗಲೇ ನಿಶ್ಚಿತಾರ್ಥ ಮಾಡಲಾಗಿದೆ. ವಯಸ್ಸು 18 ತುಂಬುತ್ತಿದ್ದಂತೆ ಮದುವೆ ಮಾಡಲು ಪೋಷಕರು ನಿರ್ಧರಿಸಿದ್ದರು.