ಚೆನ್ನೈ: ದೇವರ ಪಲ್ಲಕ್ಕಿ ಹೊರಲು ಜೀವಂತ ಆನೆಗಳನ್ನು ಬಳಸುವುದು ಸರ್ವೇ ಸಾಮಾನ್ಯ. ಮೈಸೂರು ದಸರಾದಲ್ಲಿ ಆನೆಯೇ ಅಂಬಾರಿ ಹೊರುತ್ತಿದೆ. ಇಂದಿಗೂ ಅನೇಕ ದೇವಾಲಯಗಳಲ್ಲಿ ವಿವಿಧ ಕಾರ್ಯಗಳಿಗಾಗಿ ಆನೆಗಳನ್ನು ಬಳಕೆ ಮಾಡುವುದನ್ನು ಕಾಣಬಹುದು. ಆದರೆ, ಮುಂದಿನ ದಿನಗಳಲ್ಲಿ ಜೀವಂತ ಆನೆಗಳಿಗೆ ಬದಲಾಗಿ ರೋಬೋಟಿಕ್ ಆನೆಗಳನ್ನು ಬಳಸುವ ಪರಿಪಾಠ ಆರಂಭವಾಗಲಿದೆಯೇ ಎಂಬ ಪ್ರಶ್ನೆ ಮೂಡಿದೆ.
ಏಕೆಂದರೆ ಚೆನ್ನೈನ ಶಕ್ತಿ ವಿನಾಯಗರ್ ದೇವಸ್ಥಾನಕ್ಕೆ ಬಾಲಿವುಡ್ ನಟ ಸೋನು ಸೂದ್ ಅವರ ಮಗ ಅಯಾನ್, ಪೆಟಾ ಇಂಡಿಯಾ ಮತ್ತು ಪೀಪಲ್ ಫಾರ್ ಕ್ಯಾಟಲ್ ಇನ್ ಇಂಡಿಯಾ ಸಹಯೋಗದಲ್ಲಿ ಜೀವಂತ ಆನೆಯನ್ನು ಹೋಲುವ ‘ಐರಾವತಮ್’ ಎಂಬ ರೊಬೋಟಿಕ್ ಆನೆಯನ್ನು ಉಡುಗೊರೆಯಾಗಿ ನೀಡಲಾಗಿದೆ.
ಇದುವರೆಗೂ ಈ ದೇವಾಲಯದಲ್ಲಿ ಉತ್ಸವಕ್ಕಾಗಿ ದೇವರ ಮೂರ್ತಿಯನ್ನು ಹೊರಲು ಜೀವಂತ ಆನೆಯನ್ನು ಬಳಸಲಾಗುತಿತ್ತು. ಈಗ ಜೀವಂತ ಆನೆಯ ಜಾಗವನ್ನು ರೊಬೋಟಿಕ್ ಆನೆ ತುಂಬಿದೆ.
ಸುಮಾರು 3 ಮೀ. ಎತ್ತರವಿರುವ ಐರಾವತಮ್ ಎಂಬ ರೊಬೋಟಿಕ್ ಆನೆ ಐದು ವಿದ್ಯುತ್ ಮೋಟಾರ್‌ಗಳಿಂದ ಚಲಿಸುತ್ತದೆ. ದೆ. ಆನೆಯ ಮೇಲ್ಮೈಯನ್ನು ಫೈಬರ್ ಮತ್ತಿತರ ವಸ್ತುಗಳಿಂದ ತಯಾರಿಸಲಾಗಿದೆ. ಮೈಮೇಲೆ ಆಸನವನ್ನೂ ಜೋಡಿಸಬಹುದಾಗಿದೆ.
ರೋಬೋಟಿಕ್ ಆನೆ 500 ಕೆ.ಜಿ ತೂಕವಿದ್ದು, ಚಕ್ರದ ಮೂಲಕ ಚಲಿಸಲಿದೆ. ಜೀವಂತ ಆನೆಯಂತೆ ತಲೆ, ಕಿವಿ, ಹಾಗೂ ಬಾಲವನ್ನು ಅಲುಗಾಡಿಸುತ್ತದೆ. ಜೊತೆಗೆ ಸೊಂಡಿಲಿನಲ್ಲಿ ನೀರನ್ನು ಸಿಂಪಡಿಸುವ ವ್ಯವಸ್ಥೆ ಮಾಡಲಾಗಿದೆ.
ಪೆಟಾ ಇಂಡಿಯಾದ ಯುವ ಪ್ರಶಸ್ತಿ ವಿಜೇತ ಸೋನು ಸೂದ್, ಅವರ ಮಗ ಅಯಾನ್ ಮಾತನಾಡಿ, ಈ ಉಪಕ್ರಮದಿಂದ ನಿಜವಾದ ಆನೆಗಳು ಕಾಡಿನಲ್ಲಿ ತಮ್ಮ ಕುಟುಂಬಗಳೊಂದಿಗೆ ಬದುಕಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ. ಇದು ಪೆಟಾ ಇಂಡಿಯಾದ ಸಹಯೋಗದಲ್ಲಿ ದೇಶದಾದ್ಯಂತ ನಿಯೋಜನೆಯಾದ 21ನೇ ರೊಬೋಟಿಕ್ ಆನೆಯಾಗಿದ್ದು, ತಮಿಳುನಾಡಿನಲ್ಲಿರುವ ಎರಡನೇ ಆನೆಯಾಗಿದೆ. ಐರಾವತಮ್ ಆನೆ ತಮಿಳುನಾಡಿನ ಇತಿಹಾಸದಲ್ಲಿ ಹೊಸ ಧಾರ್ಮಿಕ ಬದಲಾವಣೆ ಮೂಡಿಸಿದೆ.
ದೇವಾಲಯದ ಅಧ್ಯಕ್ಷ ಎಸ್.ಎಸ್. ಮುರುಗನ್ ಮಾತನಾಡಿ, ಇನ್ನುಮುಂದೆ ದೇವಾಲಯದ ಕಾರ್ಯಗಳಿಗೆ ಜೀವಂತ ಆನೆಯನ್ನು ಬಳಸುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.