2026-03-07 05:45:51

400 Chorla Ghat Robbery | ದರೋಡೆ ಕೇಸ್ - ಕಂಟೇನರ್ ಚಾಲಕರ ಬಂಧನ | Speed News Kannada

400 Chorla Ghat Robbery | ದರೋಡೆ ಕೇಸ್ - ಕಂಟೇನರ್ ಚಾಲಕರ ಬಂಧನ | Speed News Kannada

ಕರ್ನಾಟಕ-ಗೋವಾ ಗಡಿಯ ಚೋರ್ಲಾ ಘಾಟ್ ಮಾರ್ಗದಲ್ಲಿ ನಡೆದಿದ್ದ ₹400 ಕೋಟಿ ನಗದು ಸಾಗಿಸುತ್ತಿದ್ದ ಎರಡು ಕಂಟೇನರ್ ಲಾರಿಗಳ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಹಾರಾಷ್ಟ್ರ ಅಧಿಕಾರಿಗಳು ಲಾರಿ ಚಾಲಕರನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಕಿಶೋರ್ ಸೇಠ್ ಸೇರಿದಂತೆ ಒಟ್ಟು 6 ಜನರನ್ನು ಈಗಾಗಲೇ ವಶಕ್ಕೆ ಪಡೆದು, ಅಜ್ಞಾತ ಸ್ಥಳದಲ್ಲಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಈ ಹೈಪ್ರೊಫೈಲ್ ದರೋಡೆ ಪ್ರಕರಣವು ಅಕ್ರಮ ಹಣ ಸಾಗಾಟದ ಜಾಲವನ್ನು ಬಯಲಿಗೆಳೆದಿದೆ. 
ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿದ್ದ 400 ಕೋಟಿ ನಗದು ಹೊಂದಿದ್ದ ಎರಡು ಕಂಟೇನರ್‌ಗಳು ಬೆಳಗಾವಿ-ಗೋವಾ ಗಡಿ ಪ್ರದೇಶದ ಚೋರ್ಲಾ ಘಾಟ್ ಬಳಿ ಹೈಜಾಕ್ ಆಗಿ ನಾಪತ್ತೆಯಾಗಿದ್ದವು. ಈ ಪ್ರಕರಣ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹಾರಾಷ್ಟ್ರ ಎಸ್‌ಐಟಿ ತಂಡ ಕಂಟೇನರ್ ಚಾಲಕರಿಬ್ಬರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಅಲ್ಲದೇ, ಇಂದು ಸಂಜೆ ವೇಳೆಗೆ ಚಾಲಕರ ಬಂಧನದ ಕುರಿತು ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಚಾಲಕರ ಬಂಧನದೊಂದಿಗೆ ದರೋಡೆ ಹಿಂದೆ ಇದ್ದ ಸಂಚು, ಹಣದ ಮೂಲ ಮತ್ತು ಇದರ ಹಿಂದೆ ಕೆಲಸ ಮಾಡಿರುವ ಪ್ರಮುಖ ವ್ಯಕ್ತಿಗಳ ಬಗ್ಗೆ ಮಹತ್ವದ ಮಾಹಿತಿಗಳು ಹೊರಬೀಳುವ ನಿರೀಕ್ಷೆ ಹೆಚ್ಚಾಗಿದೆ.  

ಈ ಪ್ರಕರಣವನ್ನು ಮೊದಲು ಬಹಿರಂಗಪಡಿಸಿದ್ದ ಸಂದೀಪ್ ಪಾಟೀಲ್, ದರೋಡೆಗೊಂಡ ಹಣ ಉದ್ಯಮಿ ಕಿಶೋರ್ ಸೇರ್‌ಗೆ ಸೇರಿದ್ದೆಂದು ಆರೋಪಿಸಿದ್ದಲ್ಲದೆ, ವಿರಾಟ್ ಗಾಂಧಿ ಎಂಬ ವ್ಯಕ್ತಿಯ ಪಾತ್ರವಿದೆ ಎಂದೂ ಹೇಳಿಕೆ ನೀಡಿದ್ದ.
ಅಕ್ಟೋಬರ್ 22ರಂದು ಸಂದೀಪ್ ಪಾಟೀಲ್‌ನ್ನು ಕಿಶೋರ್ ಸೇರ್ ಮತ್ತು ಆತನ ಸಹಚರರು ಅಪಹರಿಸಿ, ಹಣದ ಬಗ್ಗೆ ಮಾಹಿತಿ ಪಡೆಯಲು ಹಿಂಸೆ ನೀಡಿದ್ದರು ಎಂಬ ಗಂಭೀರ ಆರೋಪವೂ ದಾಖಲಾಗಿದೆ.
ಇದೇ ವೇಳೆ, ಉದ್ಯಮಿ ಕಿಶೋರ್ ಹಾಗೂ ಆತನ ಸ್ನೇಹಿತ ಜಯೇಶ್ ನಡುವಿನ ಸಂಭಾಷಣೆ ವೈರಲ್ ಆಗಿದ್ದು, ದರೋಡೆಗೊಂಡ ಹಣ ಗುಜರಾತಿನ ರಾಜಕಾರಣಿಯೊಬ್ಬರಿಗೆ ಸೇರಿದೆ ಎಂಬ ಸ್ಪೋಟಕ ಮಾಹಿತಿ ಬೆಳಕಿಗೆ ಬಂದಿತ್ತು. ಈ ಎಲ್ಲ ಬೆಳವಣಿಗೆಗಳ ನಡುವೆ, ಹಣ ಸಾಗಣೆಗೆ ಬಳಸಿದ ಕಂಟೇನರ್ ಚಾಲಕರ ಬಂಧನ ಪ್ರಕರಣಕ್ಕೆ ಹೊಸ ಆಯಾಮ ಸಿಕ್ಕಂತಾಗಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.