ಬೆಂಗಳೂರು: ದೆಹಲಿಯಿಂದ ಬೆಂಗಳೂರಿಗೆ ಮಾದಕ ವಸ್ತುಗಳನ್ನು ಕಳ್ಳ ಸಾಗಾಣೆ ಮಾಡಿ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಭೇದಿಸಿರುವ ಬೆಂಗಳೂರು ಪೊಲೀಸರು 34 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದು ಎಂಟು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಇವರು ಪೊಲೀಸರ ಕಣ್ತಪ್ಪಿಸಲು ಹಲವು ಆಯಾಮಗಳ ಮೂಲಕ ಡ್ರಗ್ಸ್ ಕಳ್ಳ ಸಾಗಾಣೆ ಮಾಡುತ್ತಿದ್ದರು.
ಹೆಬ್ಬಾಳ ಪೊಲೀಸರು ಬೃಹತ್ ಡ್ರಗ್ ಜಾಲವೊಂದನ್ನು ಭೇದಿಸಿದ್ದು, ದೆಹಲಿಯಿಂದ ಬೆಂಗಳೂರಿಗೆ ಮಾದಕ ವಸ್ತುಗಳನ್ನು ತಂದು ಮಾರಾಟ ಮಾಡ್ತಿದ್ದ ಗ್ಯಾಂಗ್ನ ಹೆಡೆಮುರಿ ಕಟ್ಟಿದ್ದಾರೆ. ಎಂಟು ಜನ ಆರೋಪಿಗಳನ್ನು ಅರೆಸ್ಟ್ ಮಾಡಿರುವ ಪೊಲೀಸರು, ಈ ಒಂದೇ ತಂಡದಿಂದ ಸುಮಾರು 34 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಈ ಜಾಲ ಮೂರು ಲೇಯರ್ಗಳಲ್ಲಿ ಕೆಲಸ ಮಾಡುತ್ತಿತ್ತು. ಮಾದಕ ವಸ್ತುಗಳ ಸಾಗಾಟಕ್ಕೆ ಆರೋಪಿಗಳು ನಾನಾ ದಾರಿಗಳನ್ನು ಕಂಡುಕೊಂಡಿದ್ದರು ಎಂಬುದು ಕೂಡ ತನಿಖೆ ವೇಳೆ ಗೊತ್ತಾಗಿದೆ.
ದೆಹಲಿಯಿಂದ ರೈಲಿನಲ್ಲಿ ಡ್ರಗ್ಸ್ ಸಾಗಿಸಿದ್ದ ಆರೋಪಿಗಳು ಅವನ್ನು ಸೀರೆ, ಐರನ್ ಟೇಬಲ್ ಮತ್ತು ಚೇರ್ ಗಳಲ್ಲಿ ಅಡಗಿಸಿ ತಂದಿದ್ದರು.ನೋಡಲು ಆ ವಸ್ತುಗಳೆಲ್ಲವೂ ಗಿಫ್ಟ್ ನೀಡಲು ಕೊಡಲು ತಂದಂತೆ ಗೋಚರಿಸುತ್ತಿದ್ದವು. ಈ ರೀತಿ ತರಲಾದ ವಸ್ತುಗಳಲ್ಲಿ ಅಡಗಿಸಿಟ್ಟಿದ್ದ 4 ಕೆಜಿ 300 ಗ್ರಾಂ ಎಂಡಿಎಂಎ ಅನ್ನು ಹೆಬ್ಬಾಳ ಪೊಲೀಸರು ಜಪ್ತಿ ಮಾಡಿದ್ದಾರೆ.
ವಿಚಾರಣೆ ವೇಳೆ ಸರ್ಜಾಪುರದ ಮನೆಯೊಂದರಲ್ಲಿ ಡ್ರಗ್ಸ್ ಅಡಗಿಸಿ ಇಟ್ಟಿರುವ ಮಾಹಿತಿ ಲಭ್ಯವಾಗಿತ್ತು. ಅವರು ನೀಡಿದ ಮಾಹಿತಿ ಆಧರಿಸಿ ಡ್ರಗ್ ಪೆಡ್ಲರ್ ಮನ್ಸೂರ್ ನಿವಾಸದ ಮೇಲೆ ದಾಳಿ ನಡೆಸಿದಾಗ 10 ಕೆಜಿ ಎಂಡಿಎಂಎ ಪತ್ತೆಯಾಗಿದೆ. ಮತ್ತೊಬ್ಬ ಡ್ರಗ್ಸ್ ವ್ಯಾಪಾರಿ ಅಬ್ದುಲ್ ಸಮಾದ್ ನಿವಾಸದಲ್ಲಿ 3.5 ಕೆಜಿ ಎಂಡಿಎಂಎ ಪತ್ತೆಯಾಗಿದೆ. ಆ ಮೂಲಕ ಒಟ್ಟು 34 ಕೋಟಿ ಮೌಲ್ಯದ 17 ಕೆಜಿಗೂ ಹೆಚ್ಚಿನ ಎಂಡಿಎಂಎ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.
ಉತ್ತರ ಭಾರತ ಅಥವಾ ವಿದೇಶಗಳಿಂದ ದೆಹಲಿಗೆ ಬರುತ್ತಿದ್ದ ಡ್ರಗ್ಸ್ ಅನ್ನು ದೇಶದ ವಿವಿಧ ಭಾಗಕ್ಕೆ ಆರೋಪಿಗಳು ಸರಬರಾಜು ಮಾಡುತ್ತಿದ್ದರು. ಸೆನೆಗಲ್ನ ಡನ್ಫಾ ಗೆರಾಲ್ಡ್, ತಾಂಜೇನಿಯಾದ ಮೆಗ್ರಾತ್ ಮತ್ತು ನೈಜೀರಿಯಾ ಮೂಲದ ಒಬಿಯಾನಿಜ್ ರೀಟಾ ದೆಹಲಿಯಲ್ಲಿ ಮಾರಾಟ ಮಾಡುತ್ತಿದ್ದರು. ದೆಹಲಿ ಮೂಲದ ರೀನಾ ಯಾದವ್, ದೆಬಶಿಶ್ ಬ್ಯಾನರ್ಜಿ ಮತ್ತು ಧೀರಜ್ ಬೆಂಗಳೂರಿಗೆ ಪೂರೈಕೆ ಮಾಡುತ್ತಿದ್ದರು. ಮಂಗಳೂರು ಮೂಲದ ಬೆಂಗಳೂರು ನಿವಾಸಿಗಳಾಗಿರುವ ಮಹಮ್ಮದ್ ಮನ್ಸೂರ್ ಮತ್ತು ಅಬ್ದುಲ್ ಸಮಾದ್ ಬೆಂಗಳೂರಲ್ಲಿ ಹಂಚಿಕೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.