ಬೆಂಗಳೂರು: ಕರ್ನಾಟಕದಲ್ಲಿ ಅತಿ ಹೆಚ್ಚು ಬಜೆಟ್ ಮಂಡಿಸಿದ ದಾಖಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದಾಗಿದೆ. ರಾಜ್ಯದ ಮಟ್ಟಿಗೆ 17ನೇ ಬಾರಿ ಬಜೆಟ್ ಮಂಡಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ 2ನೇ ಸ್ಥಾನದಲ್ಲಿದ್ದಾರೆ.
ಇಡೀ ದೇಶದಲ್ಲಿಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಖ್ಯಾತಿ ಬಿಜೆಪಿ ಹಿರಿಯ ಮುಖಂಡ ವಜುಭಾಯಿ ಆರ್ ವಾಲಾ ಅವರದ್ದು. ಇವರು 1998 ಮತ್ತು 2012ರ ನಡುವೆ ಒಟ್ಟು 18 ಬಜೆಟ್ ಮಂಡಿಸಿದ್ದಾರೆ. ವಜುಭಾಯಿ ವಾಲಾ ಅವರು 2014 ರಿಂದ 2021 ರವರೆಗೆ ಕರ್ನಾಟಕದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಅವಿಭಜಿತ ಆಂಧ್ರಪ್ರದೇಶದಲ್ಲಿ ಕೆ.ರೋಸಯ್ಯ ಅವರು 16 ಬಜೆಟ್‌ಗಳನ್ನು ಮಂಡಿಸುವ ಮೂಲಕ 3ನೇ ಸ್ಥಾನದಲ್ಲಿ ಇದ್ದಾರೆ. ಅಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಅವರು 3 ಅವಧಿಗೆ ಮುಖ್ಯ ಮಂತ್ರಿಯಾಗಿ ಒಟ್ಟು 15 ಬಜೆಟ್‌ಗಳನ್ನು ಮಂಡಿಸಿದ್ದರು.
ತಮಿಳುನಾಡಿನ ವಿ.ಆರ್. ನೆಡುಂಚೆಳಿಯನ್ ಅವರು 14 ಬಜೆಟ್ ಮಂಡಿಸಿದ್ದರು. ಎಂ.ಜಿ. ರಾಮಚಂದ್ರನ್ ಮತ್ತು ಜೆ. ಜಯಲಲಿತಾ ನೇತೃತ್ವದ ಸಚಿವ ಸಂಪುಟಗಳಲ್ಲಿ 12 ವರ್ಷಗಳ ಕಾಲ ಹಣಕಾಸು ಸಚಿವರಾಗಿಯೂ ಕೆಲಸ ಮಾಡಿದ್ದಾರೆ.
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವ ರಾಮಕೃಷ್ಣ ಹೆಗಡೆ ಅವರು ಒಟ್ಟು 13 ಬಜೆಟ್‌ಗಳನ್ನು ಮಂಡಿಸಿದ್ದರು.