ತಮಿಳು ನಟ ಧನುಶ್ ಇದೀಗ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. 'ಥೆಂಡಾಲ್ ಫಿಲ್ಡ್' ನಿರ್ಮಾಣ ಸಂಸ್ಥೆ ಅವರ ವಿರುದ್ಧ ಕಾನೂನು ನೋಟಿಸ್ ಜಾರಿಗೊಳಿಸಿದ್ದು, 20 ಕೋಟಿ ರೂಪಾಯಿ ಪರಿಹಾರವನ್ನು ಬೇಡಿಕೆ ಇಟ್ಟಿದೆ. 2016ರಲ್ಲಿ 'ನಾನ್ ರುದ್ರನ್' ಎಂಬ ಚಿತ್ರಕ್ಕಾಗಿ ಧನುಶ್ ಸಹಿ ಹಾಕಿದ್ದರು ಎಂದು ನಿರ್ಮಾಣ ಸಂಸ್ಥೆ ಹೇಳಿಕೊಂಡಿದೆ. ಈ ಯೋಜನೆಯಲ್ಲಿ ನಟಿಸುವುದರ ಜೊತೆಗೆ ನಿರ್ದೇಶನ ಮಾಡುವುದಕ್ಕೂ ಧನುಶ್ ಒಪ್ಪಿಕೊಂಡಿದ್ದರು ಎಂಬುದು ನೋಟಿಸ್‌ನಲ್ಲಿನ ಆರೋಪ. ಆದರೆ, ಚಿತ್ರದ ಶೂಟಿಂಗ್ ಪ್ರಾರಂಭವಾಗದೆ ಯೋಜನೆ ಮುಂದುವರಿಯದೇ ಉಳಿದಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಕಥೆಯಲ್ಲಿ ಧನುಶ್ ಸೂಚಿಸಿದ ಬದಲಾವಣೆಗಳಿಗೆ ನಿರ್ಮಾಪಕರು ಒಪ್ಪಿಗೆ ನೀಡಿದರೂ, ನಂತರ ಸಂಪೂರ್ಣ ಚಿತ್ರಕಥೆ ಒದಗಿಸಲಿಲ್ಲ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ವಿಳಂಬದಿಂದಾಗಿ ನಿರ್ಮಾಪಕರಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ ಎಂದು ಹೇಳಲಾಗಿದೆ.ಯೋಜನೆಯ ಆರಂಭಿಕ ಹಂತದಲ್ಲಿ ಮಾಡಿದ ಹೂಡಿಕೆಗಳನ್ನು ಹಿಂಪಡೆಯಲು 20 ಕೋಟಿ ಪರಿಹಾರ ನೀಡಬೇಕೆಂದು ನಿರ್ಮಾಣ ಸಂಸ್ಥೆ ಒತ್ತಾಯಿಸಿದೆ. ನಿಗದಿತ ಅವಧಿಯೊಳಗೆ ಬೇಡಿಕೆ ಈಡೇರಿಸದಿದ್ದರೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ. ಈ ಪ್ರಕರಣದ ಕುರಿತು ಧನುಶ್ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.ಇದೀಗ ಧನುಶ್ ತಮ್ಮ ಮುಂದಿನ ಚಿತ್ರಕ್ಕೆ ತಾತ್ಕಾಲಿಕವಾಗಿ 'D55' ಎಂಬ ಶೀರ್ಷಿಕೆ ನೀಡಿದ್ದು. 'ಅಮರನ್' ಚಿತ್ರದ ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.