ಚೆನ್ನೈ: ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಜತೆಗೂಡಿ ಸರ್ಕಾರ ರಚಿಸಲು ಮುಂದಾದರೆ ಟಿವಿಕೆ ಪಕ್ಷದ ಎಲ್ಲ ಶಾಸಕರೂ ಸಾಮೂಹಿಕ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೆಲವು ಮೂಲಗಳ ಪ್ರಕಾರ ಸರ್ಕಾರ ರಚನೆ ಸಂಬಂಧ ಎಂ.ಕೆ ಸ್ಟಾಲಿನ್ ಮತ್ತು ಇ ಪಳನಿಸ್ವಾಮಿ ಮಾತುಕತೆ ನಡೆಸಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಟಿವಿಕೆ ಶಾಸಕರು ಸಾಮೂಹಿಕ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಈ ವದಂತಿಗಳಿಗೆ ಪೂರಕವಾಗಿ ಎಐಎಡಿಎಂಕೆ ಪಕ್ಷವು ಎನ್ ಡಿಎ ಮೈತ್ರಿ ಕಡಿದುಕೊಳ್ಳಲು ಮುಂದಾಗಿರುವ ಸುದ್ದಿಗಳು ಬಿತ್ತರಗೊಳ್ಳುತ್ತಿವೆ.
ಎಲ್ಲ 108 ಶಾಸಕರು ರಾಜೀನಾಮೆ ಸಲ್ಲಿಸಲು ಸಿದ್ಧರಾಗುವಂತೆ ಟಿವಿಕೆ ಮುಖಂಡ ವಿಜಯ ಸೂಚನೆ ನೀಡಿದ್ದಾರೆ. ನಿನ್ನೆ ಲೋಕಭವನದಲ್ಲಿ 2ನೇ ಬಾರಿಗೆ ರಾಜ್ಯಪಾಲರನ್ನ ಭೇಟಿಯಾಗಿದ್ದ ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್ ಸರ್ಕಾರ ರಚಿಸಲು ಹಕ್ಕು ಮಂಡಿಸಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಬಹುಮತ ಸಾಬೀತುಪಡಿಸುವುದಾಗಿ ಹೇಳಿದ್ದರು. ಇದಕ್ಕೆ ಒಪ್ಪದ ರಾಜ್ಯಪಾಲರು, ಮೊದಲು 118 ಶಾಸಕರ ಒಪ್ಪಿಗೆ ಪತ್ರ ನೀಡಿದರೆ ಸರ್ಕಾರ ರಚನೆಗೆ ಅವಕಾಶ ನೀಡುವುದಾಗಿ ತಿಳಿಸಿದ್ದರು.