2026-05-21 05:20:12

ಲಕ್ಕುಂಡಿಯ ನೂರೊಂದು ಬಾವಿ ನೂರೊಂದು ದೇವಾಲಯ ಶೀಘ್ರದಲ್ಲೇ ಪತ್ತೆ; ಎಚ್.ಕೆ.ಪಾಟೀಲ|Speed News Kannada

ಲಕ್ಕುಂಡಿಯ ನೂರೊಂದು ಬಾವಿ ನೂರೊಂದು ದೇವಾಲಯ ಶೀಘ್ರದಲ್ಲೇ ಪತ್ತೆ; ಎಚ್.ಕೆ.ಪಾಟೀಲ|Speed News Kannada

ಬೆಂಗಳೂರು:  ಐತಿಹಾಸಿಕ ಲಕ್ಕುಂಡಿಯಲ್ಲಿರುವ ನೂರೊಂದು ಬಾವಿ ನೂರೊಂದು ದೇವಾಲಯಗಳನ್ನು ಶೀಘ್ರದಲ್ಲಿಯೇ ಸ್ಯಾಟಲೈಟ್ ಇಮೇಜಿಂಗ್ ಟೆಕ್ನಾಲಜಿಯ ಮೂಲಕ NIAS ಸಂಸ್ಥೆ (ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆ) ಸಹಕಾರದೊಂದಿಗೆ ಪತ್ತೆ ಹಚ್ಚಿ ದೇಶಕ್ಕೆ ಅನಾವರಣಗೊಳಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ರವರು ತಿಳಿಸಿದರು.

ಅವರು ಬೆಂಗಳೂರಿನ ವಿಧಾನ ಸೌಧದಲ್ಲಿ ಲಕ್ಕುಂಡಿಯಲ್ಲಿರುವ ನೂರೊಂದು ಬಾವಿ ನೂರೊಂದು ದೇವಾಲಯಗಳನ್ನು ಹೊರತರುವ ಸಲುವಾಗಿ NIAS ಸಂಸ್ಥೆ ವಿಜ್ಞಾನಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡುತ್ತಾ ಈಗಾಗಲೇ 2023 ರಿಂದ ಲಕ್ಕುಂಡಿಯಲ್ಲಿ 32 ದೇವಾಲಯಗಳು, 28 ಬಾವಿಗಳು ಹಾಗೂ 07 ಇತರೆ ಸ್ಮಾರಕಗಳನ್ನು ಒಳಗೊಂಡಂತೆ ಒಟ್ಟು 70ಕ್ಕೂ ಹೆಚ್ಚು ಸ್ಮಾರಕಗಳನ್ನು ಗುರುತಿಸಲಾಗಿದೆ. ಮುಂಬರುವ ಡಿಸೆಂಬರ್-31 ರೊಳಗೆ ಲಕ್ಕುಂಡಿಯಲ್ಲಿ 101 ಬಾವಿ 101 ದೇವಾಲಯಗಳನ್ನು NIAS ಸಂಸ್ಥೆ ಹಾಗೂ ಸ್ಥಳೀಯರ ಸಹಭಾಗಿತ್ವದೊಂದಿಗೆ ಅನಾವರಣಗೊಳಿಸಲು ಅಗತ್ಯ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಎಂದರು.

ಲಕ್ಕುಂಡಿಯನ್ನು ವಿಶ್ವಪಾರಂಪರಿಕ ತಾಣಗಳ ಪಟ್ಟಿಗೆ (ಯುನೆಸ್ಕೋ) ಸೇರಿಸಲು ಪ್ರಸ್ತಾವನೆ ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದ್ದು ಯುನೆಸ್ಕೋ ಪಟ್ಟಿಗೆ ಸೇರಿಸಲು ನವಂಬರ್-2024 ರಲ್ಲಿ ಪ್ರಾಚ್ಯಾವಶೇಷಗಳ ಅನ್ವೇಷಣೆ ಭಾಗ-1ನ್ನು ನಡೆಸಿ 1500ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳನ್ನು ಅನ್ವೇಷಿಸಲಾಗಿದೆ. ಜೊತೆಗೆ 2026 ರ ಮೇ-02 ರಿಂದ ಪ್ರಾಚ್ಯಾವಶೇಷಗಳ ಅನ್ವೇಷಣೆ ಭಾಗ-2 ನ್ನು ನಡೆಸುತ್ತಿದ್ದು, ಈಗಾಗಲೇ ಎರಡನೇ ಹಂತದಲ್ಲಿ 1800 ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳು ದೊರೆತಿವೆ. ಮೊದಲ ಹಂತ ಮತ್ತು ಎರಡನೇ ಹಂತದ ಪ್ರಾಚ್ಯಾವಶೇಷಗಳನ್ನು ಸೇರಿಸಿ ಜೂನ್-30 ರ ಒಳಗಾಗಿ ದಾಖಲೆಯ ರೀತಿಯ 5000ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳನ್ನು ಅನ್ವೇಷಿಸಿ ಅವುಗಳನ್ನು ಬಯಲು ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶಿಸಲು ಸಹ ಅಗತ್ಯ ಕ್ರಮ ವಹಿಸಲಾಗಿದೆ ಎಂದರು.

ಇಸ್ರೋ ಮಾಜಿ ಅಧ್ಯಕ್ಷ ಡಾ: ಕಿರಣ ಕುಮಾರ್ ರವರು ಮಾತನಾಡಿ, ಲಕ್ಕುಂಡಿ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೆರ್ಪಡೆಯಾಗುವುದು ಅಗತ್ಯವಾಗಿದೆ. ಸ್ಯಾಟಲೈಟ್ ತಂತ್ರಜ್ಞಾನ ಬಳಸಿ ಲಕ್ಕುಂಡಿಯಲ್ಲಿರುವ 101 ಭಾವಿ ಹಾಗೂ 101 ದೇವಾಲಯಗಳನ್ನು ಅನಾವರಣಗೊಳಿಸುವ ಪ್ರಯತ್ನಕ್ಕೆ ಕೈಜೊಡಿಸುವುದಾಗಿ ಇಸ್ರೋದ ಮಾಜಿ ಅಧ್ಯಕ್ಷರು ತಿಳಿಸಿದರು.

ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ:  ಕೆ.ವಿ. ತ್ರಿಲೋಕಚಂದ್ರ, ಪ್ರವಾಸೋದ್ಯಮ ಇಲಾಖೆ ಆಯುಕ್ತ ಅಕ್ರಂ ಪಾಷಾ, ಇಸ್ರೋದ ವಿಜ್ಞಾನಿ ಪ್ರೊ. ರಾಮನಗೌಡ ನಾಡಗೌಡರ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಾಜ್ಯಮಟ್ಟದ ಸಲಹಾ ಸಮಿತಿ ಸದಸ್ಯರಾದ ಸಿದ್ಧಲಿಂಗೇಶ್ವರ ಪಾಟೀಲ ಹಾಗೂ  ಅ.ಧ. ಕಟ್ಟಿಮನಿ. ಪುರಾತತ್ತ್ವ ಸಂಗ್ರಹಾಲಯಗಳು ಮತ್ತು ಪರಂಪರೆ  ಇಲಾಖೆ ನಿರ್ದೇಶಕರಾದ ಡಾ: ಆರ್. ಶೇಜೇಶ್ವರ, ಸ್ಮಿತಾ ರೆಡ್ಡಿ, ಇಸ್ರೋ ಹಾಗೂ NIAS ಸಂಸ್ಥೆಯ ವಿಜ್ಞಾನಿಗಳು, ಸಂಶೋಧಕರು ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.