'ಬೃಂದಾವನ' ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಪರಿಚಿತರಾದ ನಟ ಹಾಗೂ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ವರುಣ್ ಆರಾಧ್ಯ, ಯೂಟ್ಯೂಬ್ ಆದಾಯ, ತಮ್ಮ ವೃತ್ತಿ ಜೀವನ ಮತ್ತು ನಟನಾಗುವ ಅವಕಾಶ ಸಿಕ್ಕ ಘಟನೆ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಯೂಟ್ಯೂಬ್ ಮಾತ್ರ ನಂಬಿಕೊಂಡು ಜೀವನ ಸಾಗಿಸುವುದು ಸುಲಭವಲ್ಲ ಎಂದು ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕಾಣುವಷ್ಟು ಆದಾಯ ಎಲ್ಲರಿಗೂ ಸಿಗುವುದಿಲ್ಲ. ಅದರಲ್ಲೂ ಗುಣಮಟ್ಟದ ಹಾಗೂ ಅಶ್ಲೀಲತೆಯಿಲ್ಲದ ಕಂಟೆಂಟ್ ಮಾಡುವವರಿಗೆ ಹಲವು ಸವಾಲುಗಳು ಎದುರಾಗುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
"ಬಹಳಷ್ಟು ಜನರಿಗೆ ಯೂಟ್ಯೂಬ್ ಒಂದನ್ನೇ ನಂಬಿಕೊಂಡು ಜೀವನ ಸಾಗಿಸಲು ಸಾಧ್ಯವಿಲ್ಲ. ಅದರ ಜೊತೆಗೆ ಮತ್ತೊಂದು ಉದ್ಯೋಗ ಅಥವಾ ವ್ಯವಹಾರ ಇದ್ದರೆ ಮಾತ್ರ ಆರ್ಥಿಕವಾಗಿ ನೆಮ್ಮದಿಯಾಗಿರಬಹುದು" ಎಂದು ವರುಣ್ ಹೇಳಿದ್ದಾರೆ. ಒಂದು ವಿಡಿಯೋ ತಯಾರಿಸಲು ಸಾಕಷ್ಟು ವೆಚ್ಚವಾಗುತ್ತದೆ. ಕ್ಯಾಮೆರಾ, ಎಡಿಟಿಂಗ್, ತಾಂತ್ರಿಕ ತಂಡ ಸೇರಿದಂತೆ ಹಲವು ಖರ್ಚುಗಳಿರುತ್ತವೆ. ಯೂಟ್ಯೂಬ್‌ನಿಂದ ಬರುವ ಆದಾಯದ ಬಹುಪಾಲು ಮತ್ತೆ ಅದೇ ಕೆಲಸಕ್ಕೆ ಹೂಡಿಕೆ ಮಾಡಬೇಕಾಗುತ್ತದೆ. ಆದ್ದರಿಂದ ಹೆಚ್ಚುವರಿ ಆದಾಯದ ಮೂಲ ಇರಬೇಕು ಎಂದು ಅವರು ತಿಳಿಸಿದ್ದಾರೆ. ಸದ್ಯ ವರುಣ್ ಆರಾಧ್ಯ ತಮ್ಮದೇ ಟ್ರಾವೆಲ್ ವ್ಯವಹಾರ ನಡೆಸುತ್ತಿರುವುದರ ಜೊತೆಗೆ ಯೂಟ್ಯೂಬ್ ವ್ಲಾಗ್‌ಗಳನ್ನೂ ಮಾಡುತ್ತಿದ್ದಾರೆ. ಈ ಎರಡನ್ನೂ ಸಮತೋಲನದಿಂದ ನಿರ್ವಹಿಸುತ್ತಿರುವುದಾಗಿ ತಿಳಿಸಿದ್ದಾರೆ. ಟಿಕ್‌ಟಾಕ್ ಮೂಲಕ ಸೋಷಿಯಲ್ ಮೀಡಿಯಾ ಪಯಣ ಆರಂಭಿಸಿದ್ದ ಅವರು, ಬಳಿಕ ಇನ್‌ಸ್ಟಾಗ್ರಾಂ ರೀಲ್ಸ್ ಮೂಲಕ ಜನಪ್ರಿಯತೆ ಗಳಿಸಿದರು. ಇದೇ ಜನಪ್ರಿಯತೆ ಅವರಿಗೆ ಕಿರುತೆರೆಗೆ ಪ್ರವೇಶಿಸುವ ಅವಕಾಶ ತಂದುಕೊಟ್ಟಿತು.
'ಬೃಂದಾವನ' ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕ ಘಟನೆ ಬಗ್ಗೆ ಮಾತನಾಡಿದ ವರುಣ್, "ಒಂದು ದಿನ ಮಧ್ಯರಾತ್ರಿ ಸುಮಾರು 1 ಗಂಟೆಗೆ ನಿರ್ದೇಶಕ ರಾಮ್‌ಜಿ ಅವರ ಪ್ರೊಡಕ್ಷನ್ ಹೌಸ್‌ನಿಂದ ಕರೆ ಬಂದಿತ್ತು. ಅಷ್ಟು ರಾತ್ರಿ ಕರೆ ಬಂದಿದ್ದರಿಂದ ಅದು ಪ್ರ್ಯಾಂಕ್ ಇರಬಹುದು ಎಂದು ಭಾವಿಸಿದ್ದೆ. ಆದರೆ ಅದು ನಿಜವಾದ ನಟನೆಯ ಅವಕಾಶವಾಗಿತ್ತು" ಎಂದು ನೆನಪಿಸಿಕೊಂಡಿದ್ದಾರೆ. ಬಳಿಕ ಆಡಿಷನ್‌ಗೆ ತೆರಳಿ, ನೀಡಿದ ಸ್ಕ್ರಿಪ್ಟ್‌ನ್ನು ಅಭಿನಯಿಸಿ ತೋರಿಸಿದ ಅವರು, ತಂಡದ ಮೆಚ್ಚುಗೆ ಗಳಿಸಿ ಧಾರಾವಾಹಿಗೆ ಆಯ್ಕೆಯಾದರು.
'ಬೃಂದಾವನ' ಧಾರಾವಾಹಿ ಕೆಲವೇ ತಿಂಗಳಲ್ಲಿ ಮುಕ್ತಾಯಗೊಂಡರೂ, ವರುಣ್ ಆರಾಧ್ಯ ಅವರ ವೃತ್ತಿಜೀವನಕ್ಕೆ ಅದು ಮಹತ್ವದ ತಿರುವು ನೀಡಿತು. ಸದ್ಯ ಅವರು ಯೂಟ್ಯೂಬ್, ಟ್ರಾವೆಲ್ ಬಿಸಿನೆಸ್ ಹಾಗೂ ಇತರ ಹೊಸ ಅವಕಾಶಗಳತ್ತ ಗಮನ ಹರಿಸುತ್ತಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಇತ್ತೀಚೆಗೆ ತಮ್ಮ ಕುಟುಂಬದವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುವ ಅವಹೇಳನಕಾರಿ ಕಾಮೆಂಟ್‌ಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ವರುಣ್, ವೈಯಕ್ತಿಕ ಜೀವನದ ಕಷ್ಟದ ದಿನಗಳನ್ನೂ ಸಂದರ್ಶನದಲ್ಲಿ ಹಂಚಿಕೊಂಡಿದ್ದರು.