ನವದೆಹಲಿ: ನವದೆಹಲಿಯ ಜಂತರ್ ಮಂತರ್‌ನಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' (CJP) ನೇತೃತ್ವದಲ್ಲಿ ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿರುವ ಬೆನ್ನಲ್ಲೇ, ಹೋರಾಟದ ಪ್ರಮುಖ ಮುಖಗಳಲ್ಲಿ ಒಬ್ಬರಾದ ಅಭಿಜೀತ್ ದಿಪ್ಕೆ ಅವರ ಸೋಷಿಯಲ್ ಮೀಡಿಯಾ ಪೋಸ್ಟ್ ಒಂದು ಬಾರಿ ವೈರಲ್ ಆಗಿದೆ.
ತಮಗೆ ಕಳೆದ ಕೆಲವು ದಿನಗಳಿಂದ ತೀವ್ರ ಜ್ವರ ಮತ್ತು ಮೈಕೈ ನೋವು ಇರುವುದರಿಂದ, ಮಾತ್ರೆಗಳನ್ನು ತೆಗೆದುಕೊಂಡು ಹೋರಾಟದಲ್ಲಿದ್ದಾಗಿ ತಿಳಿಸಿದ ಅಭಿಜೀತ್, ಕೆಲ ಗಂಟೆಗಳ ಕಾಲ ವಿಶ್ರಾಂತಿ ಪಡೆಯಲು ಪ್ರತಿಭಟನಾ ಸ್ಥಳದಿಂದ ದೂರವಿರುವುದಾಗಿ 'ಎಕ್ಸ್' (X) ಖಾತೆಯಲ್ಲಿ ಬರೆದುಕೊಂಡಿದ್ದರು. "ಇಂದು ಜಂತರ್ ಮಂತರ್‌ನಲ್ಲಿ ನಾನು ಕಾಣಿಸದಿದ್ದರೆ ಕ್ಷಮಿಸಿ, ಸಂಜೆಯ ವೇಳೆಗೆ ಚೇತರಿಸಿಕೊಂಡು ಮತ್ತೆ ಪ್ರತಿಭಟನಾ ಸ್ಥಳಕ್ಕೆ ಹಿಂತಿರುಗುತ್ತೇನೆ" ಎಂದು ಅವರು ತಿಳಿಸಿದ್ದರು. ಈ ಪೋಸ್ಟ್ ಬಹಿರಂಗಗೊಳ್ಳುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳು ಆರಂಭವಾಗಿವೆ.
ಅಭಿಜೀತ್ ಅವರ ಬೆಂಬಲಿಗರು "ಆರೋಗ್ಯ ಮುಖ್ಯ, ವಿಶ್ರಾಂತಿ ತಗೊಳ್ಳಿ, ಇದೊಂದು ಸುದೀರ್ಘ ಹೋರಾಟ" ಎಂದು ಆರೈಕೆ ಕೋರಿದರೆ, ಮತ್ತೊಂದೆಡೆ ಕಟು ಟೀಕೆಗಳೂ ವ್ಯಕ್ತವಾಗಿವೆ. "ಸಾಮಾನ್ಯ ವಿದ್ಯಾರ್ಥಿಗಳನ್ನು ಸುಡುವ ಬಿಸಿಲಿನಲ್ಲಿ ಕೂರಿಸಿ, ನಾಯಕರು ಜ್ವರದ ನೆಪ ಹೇಳಿ ಹಸಿರು ವಾತಾವರಣದ ಐಷಾರಾಮಿ ಅಪಾರ್ಟ್‌ಮೆಂಟ್‌ಗಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ" ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ. ಇನ್ನು ಕೆಲವರು ಇದನ್ನು ಹಾಸ್ಯಕ್ಕೀಡು ಮಾಡಿ "ಪ್ರತಿಭಟನೆಯಲ್ಲಿ ಸಿಕ್ ಲೀವ್ (ಅನಾರೋಗ್ಯ ರಜೆ) ಕೇಳಿದ ಮೊದಲ ವ್ಯಕ್ತಿಯನ್ನು ನೋಡುತ್ತಿದ್ದೇವೆ" ಎಂದೆಲ್ಲಾ ಮೀಮ್ಸ್‌ಗಳನ್ನು ಹಂಚಿಕೊಂಡಿದ್ದಾರೆ.
ಇದೇ ವೇಳೆ, ಸೋನಮ್ ವಾಂಗ್ಚುಕ್ ಅವರ ಪತ್ನಿ ರಾಹುಲ್ ಗಾಂಧಿ ನಡೆಗೆ ಟೀಕೆ ವ್ಯಕ್ತಪಡಿಸಿದ್ದು, ಎಎಪಿ ನಾಯಕರು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದು ಹಾಗೂ ವಾಂಗ್ಚುಕ್ ಬಿಜೆಪಿ ನಾಯಕರನ್ನು ಭೇಟಿಯಾಗಿದ್ದಕ್ಕೂ ಅಭಿಜೀತ್ ಅವರ ಈ ನಿರ್ಧಾರಕ್ಕೂ ಲಿಂಕ್ ಕಲ್ಪಿಸಿ ನೆಟ್ಟಿಗರು ತಮ್ಮದೇ ಆದ ವಿಶ್ಲೇಷಣೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ದೇಶದ ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಆಗ್ರಹಿಸಿ ಸಿಜೆಪಿ ನಡೆಸುತ್ತಿರುವ ಈ ಪ್ರತಿಭಟನೆ ಪ್ರಸ್ತುತ ದೆಹಲಿಯಲ್ಲಿ ಕಾವೇರಿದ ವಾತಾವರಣ ಸೃಷ್ಟಿಸಿದೆ.