2026-05-05 05:34:14

shringeri vote count; bjp tamper ballot papers; cm siddaramaiah| ಶೃಂಗೇರಿ ಮತ ಎಣಿಕೆ: ಮತಪತ್ರಗಳನ್ನು ತಿದ್ದಿರುವುದು ಸ್ಪಷ್ಟ: ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ| Speed News Kannada

shringeri vote count; bjp tamper ballot papers; cm siddaramaiah| ಶೃಂಗೇರಿ ಮತ ಎಣಿಕೆ: ಮತಪತ್ರಗಳನ್ನು ತಿದ್ದಿರುವುದು ಸ್ಪಷ್ಟ: ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ| Speed News Kannada

ಬೆಂಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿಯವರು ಕ್ರಿಮಿನಲ್‌ ಪಿತೂರಿ ಮಾಡಿ (ವೋಟ್‌ ಚೋರಿ) ಗೆದ್ದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.

ಅವರು ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ಹರಿಹಾಯ್ದರು.

ಹೈಕೋರ್ಟ್‌ ಆದೇಶದ ಅನ್ವಯ ಅಂಚೆ ಮತಗಳ ಮರು ಎಣಿಕೆ ನಡೆದಿದೆ. ರಾಜೇಗೌಡ ಕಳೆದ ವಿಧಾನಸಭೆಯಲ್ಲಿ 201 ಮತಗಳಿಂದ ಗೆದ್ದಿದ್ದರು. ಅವರಿಗೆ 59,171 ಇವಿಎಂ ಮತ, 569 ಅಂಚೆ ಮತಗಳು ಬಂದಿದ್ದವು, ಬಿಜೆಪಿಯ ಜೀವರಾಜ್ ಗೆ 58,970 ಇವಿಎಂ ಮತ, 692 ಮತ ಬಂದಿದ್ದವು. ಇವೆಲ್ಲವೂ ಮೌಲ್ಯಯುತ ಮತ ಎಂದು ಚುನಾವಣಾ ಅಧಿಕಾರಿಗಳು, ಚುನಾವಣೆ ಏಜೆಂಟ್, ರಿಟರ್ನಿಂಗ್ ಅಧಿಕಾರಿಗಳು ಘೋಷಣೆ ಮಾಡಿದ್ದರು. ನಂತರ ಜೀವರಾಜ್ ಚುನಾವಣಾ ಅಕ್ರಮ ನಡೆದಿದೆ ಎಂದು ಹೈಕೋರ್ಟ್ ನಲ್ಲಿ ಮರು ಎಣಿಕೆಗೆ ಕೇಸ್ ಹಾಕಿದ್ದರು. ಅವರ ಅರ್ಜಿ ಪುರಸ್ಕಾರ ಮಾಡಿ ಹೈಕೋರ್ಟ್ 2026ರ ಮಾರ್ಚ್‌ 6 ರಂದು ಮರು ಎಣಿಕೆಗೆ ಆದೇಶ ಮಾಡಿತ್ತು ಎಂದರು.


ಮೇ 2 ರಂದು ಮರುಎಣಿಕೆ ನಡೆದಿದೆ. ಮರು ಎಣಿಕೆಯಲ್ಲಿ 314 ಮತಗಳು ಮಾತ್ರ ಸಿಂಧು ಆಗಿದ್ದು, ಅದರಲ್ಲಿ 255 ಮತ ಅಸಿಂಧು ಆಗಿವೆ. ಏಕೆ ಆ ಮತಗಳು ಅಸಿಂಧು ಆದವು? 2023 ರಲ್ಲಿ ಜೀವರಾಜ್ ಗೆ 692 ಮತ ಬಿದ್ದಿತ್ತು. ಮರು ಎಣಿಕೆಯಲ್ಲಿ 690 ಮತ ಲಭಿಸಿದೆ. ಎರಡು ಮತ ಮಾತ್ರ ಕಡಿಮೆ ಆಗಿದೆ. ಇದರಿಂದ ಬಿಜೆಪಿಯವರು ಕ್ರಿಮಿನಲ್‌ ಪಿತೂರಿ ಮಾಡಿ ವೋಚ್‌ ಚೋರಿ ಮಾಡಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಆರೋಪಿಸಿದರು.


ರಾಜೇಗೌಡರಿಗೆ ಬಿದ್ದ 255 ಮತ ಅಸಿಂಧುವಾಗಲು ವ್ಯವಸ್ಥಿತವಾಗಿ ತಿದ್ದಲಾಗಿದೆ. ಜೀವರಾಜ್ 201 ಮತಗಳ ಅಂತರದಲ್ಲಿ ಸೋತಿದ್ದರು. ಮರು ಎಣಿಕೆ ಆದ ಮೇಲೆ 52 ಮತ ಹೆಚ್ಚಾಗಿದೆ. ಮತಎಣಿಕೆ ಆದ ಮೇಲೆ ಎಲ್ಲಾ ದಾಖಲಾತಿಗಳನ್ನು ಟ್ರಂಕ್ ನಲ್ಲಿ ಇಟ್ಟು ಬೀಗ ಹಾಕಲಾಗುತ್ತದೆ. ಆಗ ಅಧಿಕಾರದಲ್ಲಿದ್ದ ಬಿಜೆಪಿಯವರು ಪ್ರಭಾವ ಬಳಿಸಿ, ಸಿಬ್ಬಂದಿ ಮೂಲಕ ಟ್ರಂಕ್ ನಲ್ಲಿ ಇದ್ದ ಪತ್ರಗಳನ್ನ ತಿದ್ದಿರುವುದು ಖಚಿತವಾಗಿದೆ, ಇದು ಕ್ರಿಮಿನಲ್ ಅಪರಾಧ ಎಂದು ಆಪಾದಿಸಿದರು.

ರಾಜೇಗೌಡರಿಗೆ 3 ನೇ ಸುತ್ತಿನಲ್ಲಿ ಲಭಿಸಿದ 170 ಅಂಚೆ ಮತಗಳು ಅಸಿಂಧುವಾಗಿವೆ. 2023 ರಲ್ಲಿ ಆ ಮತಗಳು ವ್ಯಾಲಿಡ್ ಆಗಿದ್ದವು. ಹಣ್ಣು ತಿಂದವ ತಪ್ಪಿಸಿಕೊಂಡ, ಸಿಪ್ಪೆ ತಿಂದವ ಸಿಕ್ಕಿ ಹಾಕಿಕೊಂಡ ಅನ್ನೋ ಗಾದೆ ಮಾತಿನಂತೆ ಆಗಿದೆ. ಇದು ಬಿಜೆಪಿ ಮಾಡಿರುವ ಕುತಂತ್ರದ ಕೆಲಸ. ಈ ಕೆಲಸವನ್ನು ಕೇಂದ್ರದ ಮಂತ್ರಿ ಪ್ರಲ್ಹಾದ  ಜೋಶಿ, ಶೋಭಾ ಕರಂದ್ಲಾಜೆ, ಅಶೋಕ್ ಸಮರ್ಥನೆ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಲೇವಡಿ ಮಾಡಿದರು.

 

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.