ಬೆಂಗಳೂರು: ಪಕ್ಕದ ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷ ತಮಿಳಗಾ ವೆಟ್ರಿ ಕಳಗಂ (ಟಿವಿಕೆ) ಭರ್ಜರಿ ಗೆಲುವು ದಾಖಲಸಿದ ಬೆನ್ನಲ್ಲೇ ಕರ್ನಾಟಕದಲ್ಲಿ ಪ್ರಾದೆಶಿಕ ಪಕ್ಷಗಳು ಏಕೆ ಯಶಸ್ಸು ಕಾಣುತ್ತಿಲ್ಲ ಎಂಬ ಚರ್ಚೆ ಆರಂಭವಾಗಿದೆ. ಜತೆಗೆ ಹೊಸ ಪ್ರಾದೇಶಿಕ ಪಕ್ಷ ರಚಿಸಿದರೆ ಯಶಸ್ಸು ಸಿಗಬಹುದು ಎಂಬ ಪ್ರಶ್ನೆಗಳೂ ಹುಟ್ಟಿಕೊಂಡಿವೆ.
ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೂ ಎರಡು ವರ್ಷ ಕಾಲಾವಕಾಶವಿದ್ದು, ಹೊಸ ಪಕ್ಷ ರಚಿಸಿದರೆ ಮುಂದಿನ 24 ತಿಂಗಳಲ್ಲಿ ಪಕ್ಷವನ್ನು ಚುನಾವಣೆಗೆ ಸಜ್ಜುಗೊಳಿಸಬಹುದು ಎಂಬ ನಿರೀಕ್ಷೆಯೂ ಇದೆ. ಈ ನಿಟ್ಟಿನಲ್ಲಿ ಚಿಂತನೆ ನಡೆಸಿರುವ ಮಾಜಿ ಬಿಗ್ ಬಾಸ್ ಸ್ಪರ್ಧಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹೊಸ ಪಕ್ಷ ಸ್ಥಾಪಿಸುವ ಸುಳಿವು ನೀಡಿದ್ದಾರೆ.
ಕನ್ನಡ ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ, ಲಾಯರ್ ಜಗದೀಶ್ ಹೊಸ ಪಕ್ಷ ಸ್ಥಾಪನೆಯ ಕನಸು ಕಂಡಿದ್ದಾರೆ. ಶೀಘ್ರವೇ ಹೊಸ ಪಕ್ಷ ಸ್ಥಾಪನೆ ಮಾಡುವುದಾಗಿ ಅವರು ಹೇಳಿದ್ದಾರೆ. ಜೆಸಿಬಿ ಪಕ್ಷಗಳ ಸಹವಾಸ ಸಾಕಾಗಿದೆ. ಹೊಸ ರಾಜಕೀಯ ಪಕ್ಷದ ಅನಿವಾರ್ಯತೆ ಎದುರಾಗಿದೆ ಎಂದು ತಿಳಿಸಿದ್ದಾರೆ.
ಅವರ ಫೇಸ್ ಬುಕ್ ಹೇಳಿಕೆ ಹೀಗಿದೆ:
‘ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಸಹವಾಸ ಕರ್ನಾಟಕದ ಮತದಾರರಿಗೆ ಸಾಕಾಗಿದೆ. ಭ್ರಷ್ಟಾಚಾರ, ನಿರುದ್ಯೋಗ, ಬಡತನ, ಬೆಲೆ ಏರಿಕೆ, ವಿರುದ್ಧ ಜನರ ಜೊತೆ ನಿಲ್ಲುವ, ಸಾಮಾನ್ಯ ಜನರ ನಿಲ್ಲಿಸಿ ಗೆಲ್ಲಿಸಿ ಸರ್ಕಾರ ರಚಿಸುವ ಅವಶ್ಯಕತೆ ಮುಂದಿನ ಕರ್ನಾಟಕ MLA ( ವಿಧಾನಸಭಾ)ಚುನಾವಣೆಯಲ್ಲಿ ಮಾಡಬೇಕೆಂದು ಪ್ರಯತ್ನ ನಡೆಯುತ್ತಿದೆ. ಹತ್ತಾರು ರಾಜಕೀಯ ಪಕ್ಷಗಳು ಇರುವ ಕರ್ನಾಟಕಕ್ಕೆ, ಈ ಮೂರು ಪಕ್ಷಗಳ ಭ್ರಷ್ಟ ರಾಜಕಾರಣಿಗಳಿಗೆ ತೊಡೆ ತಟ್ಟಿ ನಿಲ್ಲುವ ಒಬ್ಬ ನಾಯಕ ಹಾಗೂ ಸಾಮಾನ್ಯ ವರ್ಗದ ಜನರ ಜೊತೆ ನಿಲ್ಲುವ ಒಂದು ರಾಜಕೀಯ ಪಕ್ಷ ಅವಶ್ಯಕತೆ ಇದೆ. ಶೀಘ್ರವೇ ಪಾರ್ಟಿ ಹಾಗೂ ಜವಾಬ್ದಾರಿ ಹೊತ್ತ ನಿಮ್ಮ ಮುಂದೆ!’
ಜಾತಿ ಆಧಾರದಲ್ಲಿ ಚುನಾವಣೆ ನಡೆಯುವ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ನೆಲೆ ಕಂಡುಕೊಳ್ಳುವುದೇ ಎಂಬ ಅನುಮಾನ ಇದ್ದೇ ಇದೆ. ಇದ್ದುದರಲಿ ಜನತಾಪರಿವಾರ ಮಾತ್ರ ಯಶಸ್ವಿಯಾಗಿದ್ದು ರಾಜ್ಯದಲ್ಲಿ ಸ್ವತಂತ್ರವಾಗಿ ಅಧಿಕಾರ ನಡೆಸಿತ್ತು. ನಂತರ ಹುಟ್ಟಿಕೊಂಡ ಅನೇಕ ಪ್ರಾದೇಶಿಕ ಪಕ್ಷಗಳು ಉಸಿರಾಡಲೇ ಇಲ್ಲ.
ಟಿವಿಕೆ ಪಕ್ಷವನ್ನೇ ಮಾದರಿಯಾಗಿಟ್ಟುಕೊಂಡು ಭವಿಷ್ಯದಲ್ಲಿ ಗಟ್ಟಿಯಾದ ಪ್ರಾದೇಶಿಕ ಪಕ್ಷ ಅಸ್ತಿತ್ವಕ್ಕೆ ಬರುವ ಸಾಧ್ಯೆತೆಗಳನ್ನು ತಳ್ಳಿಹಾಕುವಂತಿಲ್ಲ. ಕಾಲಾಯ ತಸ್ಮೈನಮಃ!