ಬೆಳಗಾವಿಯಲ್ಲಿ ಆರ್ಎಸ್ಎಸ್ನ (RSS) ಅತ್ಯಂತ ಪ್ರಮುಖ ವಾರ್ಷಿಕ ಸಭೆ ಆರಂಭಗೊಳ್ಳುವ ಮುನ್ನವೇ ರಾಜ್ಯ ರಾಜಕಾರಣದಲ್ಲಿ ಹೈವೋಲ್ಟೇಜ್ ಜಿದ್ದಾಜಿದ್ದಿ ಶುರುವಾಗಿದೆ. ಇದೇ ಜುಲೈ 10ರಿಂದ 12ರವರೆಗೆ ಮೂರು ದಿನಗಳ ಕಾಲ ಬೆಳಗಾವಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರ ಮಹತ್ವದ ಸಭೆ ಆಯೋಜನೆಗೊಂಡಿದೆ. ದೇಶದ ಭವಿಷ್ಯದ ದೃಷ್ಟಿಯಿಂದ ಹಾಗೂ ಸಂಘಟನಾತ್ಮಕವಾಗಿ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಈ ಸಭೆಯ ಬೆನ್ನಲ್ಲೇ, ರಾಜ್ಯ ಸರ್ಕಾರ ಹಾಗೂ ಆರ್ ಎಸ್ ಎಸ್ ನಡುವೆ ವಾಕ್ಸಮರ ತಾರಕಕ್ಕೇರಿದೆ. ಬೆಳಗಾವಿಯಲ್ಲಿ ನಡೆಯಲಿರುವ ಈ ಬೃಹತ್ ಸಭೆಯಲ್ಲಿ ದೇಶದ ಮೂಲೆ ಮೂಲೆಗಳಿಂದ ಪ್ರಾಂತ ಪ್ರಚಾರಕರು, ಸಹ ಪ್ರಾಂತ ಪ್ರಚಾರಕರು, ಕ್ಷೇತ್ರ ಪ್ರಚಾರಕರು ಹಾಗೂ ಸಹ ಕ್ಷೇತ್ರ ಪ್ರಚಾರಕರು ಸೇರಿದಂತೆ ಸಂಘದ ಪ್ರಮುಖ ಮುಖಂಡರು ಭಾಗವಹಿಸುತ್ತಿದ್ದಾರೆ.
ಮುಂಬರುವ ಜನಗಣತಿ ಪ್ರಕ್ರಿಯೆ ಸೇರಿದಂತೆ ದೇಶದ ಪ್ರಸಕ್ತ ವಿದ್ಯಮಾನಗಳ ಕುರಿತು ಈ ಮೂರು ದಿನಗಳ ಮಂಥನದಲ್ಲಿ ಸುದೀರ್ಘ ಚರ್ಚೆಗಳು ನಡೆಯಲಿವೆ. ಆದರೆ, ಈ ಕಾರ್ಯಕ್ರಮದ ಬೆನ್ನಲ್ಲೇ ಸಚಿವ ಪ್ರಿಯಾಂಕ್ ಖರ್ಗೆ ಅವರು ನೀಡಿರುವ ಹೇಳಿಕೆ ಈಗ ತೀವ್ರ ಸಂಚಲನ ಸೃಷ್ಟಿಸಿದೆ. ಬೀದಿಗಿಳಿದು ಪರೇಡ್ ಮಾಡಲು ಬಿಡುವುದಿಲ್ಲ: ಸಚಿವರ ಪಟ್ಟು ಆರ್‌ಎಸ್‌ಎಸ್ ಸಭೆಯ ಕುರಿತು ಕಟುವಾಗಿ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, ಸಂಘಟನೆಯವರು ತಮ್ಮ ಸಭೆ ಅಥವಾ ಕಾರ್ಯಕ್ರಮಗಳನ್ನು ಬೇಕಿದ್ದರೆ ಸಭಾಂಗಣದ ಒಳಗೆ ನಡೆಸಿಕೊಳ್ಳಲಿ, ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಯಾವುದೇ ಕಾರಣಕ್ಕೂ ಬೀದಿಗಿಳಿದು ಪಥಸಂಚಲನ (ಪರೇಡ್) ನಡೆಸಲು ಬಿಡುವುದಿಲ್ಲ ಎಂದು ಅತ್ಯಂತ ಕಡಕ್ಕಾಗಿ ಹೇಳಿದ್ದಾರೆ.
ಸಾರ್ವಜನಿಕ ರಸ್ತೆಗಳಲ್ಲಿ ಪರೇಡ್ ನಡೆಸುವುದಕ್ಕೆ ಕಾನೂನಿನ ಚೌಕಟ್ಟಿನಲ್ಲಿ ಕಟ್ಟುನಿಟ್ಟಿನ ನಿಯಮಗಳಿದ್ದು, ಅದನ್ನು ಉಲ್ಲಂಘಿಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ. ನಾನು ಸಚಿವನಾಗಿ ಅಧಿಕಾರದಲ್ಲಿ ಇರುವವರೆಗೂ ಆರ್ಎಸ್ಎಸ್ನ ಇಂತಹ ಪಥಸಂಚಲನಗಳಿಗೆ ಮುಂಚಿತವಾಗಿಯೇ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯ ಎಂದು ಪ್ರಿಯಾಂಕ್ ಖರ್ಗೆ ಗುಡುಗಿದ್ದಾರೆ. ಬೆಳಗಾವಿ ಕಾರ್ಯಕ್ರಮ ಅಧಿಕೃತವಾಗಿ ಆರಂಭವಾಗುವುದಕ್ಕೂ ಮುನ್ನವೇ ಅವರು ಈ ಮಾತನ್ನು ಮತ್ತೊಮ್ಮೆ ಪುನರುಚ್ಚರಿಸಿರುವುದು ಸಂಘ ಪರಿವಾರ ಹಾಗೂ ಬಿಜೆಪಿ ನಾಯಕರ ಕೆರಳಿಸಿದೆ. ಸದ್ಯ ಸಚಿವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಬೆಳಗಾವಿ ಅಧಿವೇಶನದ ಹೊತ್ತಲ್ಲೇ ಈ ರಾಜಕೀಯ ಕಿಡಿ ಮತ್ತಷ್ಟು ದೊಡ್ಡದಾಗುವ ಮುನ್ಸೂಚನೆ ಸಿಕ್ಕಿದೆ.