2026-07-11 11:37:43

RAJASTHAN | ಸರ್ಕಾರಿ ಕೆಲಸಕ್ಕಾಗಿ ತಾಯಿಯನ್ನೇ ಕೊಂದ ಮಗಳು ತಂದೆಯನ್ನೂ ಮೊದಲೇ ಮುಗಿಸಿದ್ದಳೇ? | SNK

RAJASTHAN | ಸರ್ಕಾರಿ ಕೆಲಸಕ್ಕಾಗಿ ತಾಯಿಯನ್ನೇ ಕೊಂದ ಮಗಳು ತಂದೆಯನ್ನೂ ಮೊದಲೇ ಮುಗಿಸಿದ್ದಳೇ? | SNK

ರಾಜಸ್ಥಾನ: ಜೈಪುರದಲ್ಲಿ ಇಡೀ ದೇಶವೇ ಬೆಚ್ಚಿಬೀಳುವಂತಹ ಭೀಕರ ಹತ್ಯೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸರ್ಕಾರಿ ಕೆಲಸ ಮತ್ತು ಆಸ್ತಿಯ ಆಸೆಗಾಗಿ 23 ವರ್ಷದ ಕಾನೂನು ವಿದ್ಯಾರ್ಥಿನಿಯೊಬ್ಬಳು ತನ್ನ ಹೆತ್ತ ತಾಯಿಯನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವ ಆಘಾತಕಾರಿ ಘಟನೆ ನಡೆದಿದೆ.  ಇದೀಗ ಪ್ರಕರಣಕ್ಕೆ ಮತ್ತೊಂದು ಸ್ಫೋಟಕ ತಿರುವು ಸಿಕ್ಕಿದ್ದು, ಈಕೆ ತನ್ನ ತಂದೆಯನ್ನೂ ಸಹ ತಾನೇ ಕೊಂದಿದ್ದಾಳೆ ಎಂದು ಯುವತಿಯ ಸೋದರಮಾವ ಗಂಭೀರ ಆರೋಪ ಮಾಡಿದ್ದಾರೆ. ಜೈಪುರದ ಪ್ರತಾಪ್ ನಗರ ನಿವಾಸಿಯಾದ ಆಯುಷಿ ಶರ್ಮಾ ಬಂಧಿತ ಯುವತಿ. ಈಕೆ ಕಾನೂನು ಪದವಿಯ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಜುಲೈ 3 ರಂದು ಈಕೆಯ ತಾಯಿ ನೀರಜ್ ಶರ್ಮಾ ಅವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಆದರೆ ತನಿಖೆ ನಡೆಸಿದ ಪೊಲೀಸರಿಗೆ ಇದು ಕೇವಲ ಅಪಘಾತವಾಗಿರದೆ, ಯುವತಿ ಆಯುಷಿ ತನ್ನ ಚಿಕ್ಕಪ್ಪ ಮತ್ತು ಸೋದರಸಂಬಂಧಿಯೊಂದಿಗೆ ಸೇರಿ ನಡೆಸಿದ ಹತ್ಯೆಯ ಸಂಚು ಎಂಬುದು ತಿಳಿದುಬಂದಿದೆ. ಸುಮಾರು 7 ಲಕ್ಷ ರೂಪಾಯಿ ನೀಡಿ ಬಾಡಿಗೆ ಹಂತಕರ ಮೂಲಕ ತಾಯಿಯ ಮೇಲೆ ಸ್ಕಾರ್ಪಿಯೋ ಕಾರನ್ನು ಅತಿ ವೇಗವಾಗಿ ಚಲಾಯಿಸಿ ಅಪಘಾತದ ರೂಪದಲ್ಲಿ ಕೊಲೆ ಮಾಡಿಸಲಾಗಿತ್ತು.

ಆಯುಷಿಯ ತಂದೆ ವಿಜಯ್ ಶರ್ಮಾ ಅವರು ರಾಜಸ್ಥಾನ ಹೈಕೋರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದು, ಒಂದು ವರ್ಷದ ಹಿಂದೆ ಮೃತಪಟ್ಟಿದ್ದರು. ತಂದೆಯ ಸಾವಿನ ನಂತರ ಅನುಕಂಪದ ಆಧಾರದ ಮೇಲೆ ಸಿಗುವ ಸರ್ಕಾರಿ ಕ್ಲರ್ಕ್ ಕೆಲಸ ತನಗೆ ಸಿಗಬೇಕೆಂದು ಆಯುಷಿ ಹಠ ಹಿಡಿದಿದ್ದಳು. ಆದರೆ ತಾಯಿ ನೀರಜ್ ಶರ್ಮಾ ಅವರೇ ಆ ಕೆಲಸಕ್ಕೆ ಸೇರಿಕೊಂಡಿದ್ದರು. ಜೊತೆಗೆ ಅಂಗವಿಕಲನಾಗಿದ್ದ ತನ್ನ ಮಗನಿಗೆ ಆ ಕೆಲಸ ಕೊಡಿಸಲು ತಾಯಿ ಆಲೋಚಿಸಿದ್ದರು. ಇದರಿಂದ ತಾಯಿಯ ಮೇಲೆ ತೀವ್ರ ದ್ವೇಷ ಸಾಧಿಸುತ್ತಿದ್ದ ಆಯುಷಿ, ಆಸ್ತಿ ಮತ್ತು ಸರ್ಕಾರಿ ಕೆಲಸಕ್ಕಾಗಿ ಈ ಕ್ರೂರ ಕೃತ್ಯ ಎಸಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಯುಷಿ ಸೇರಿದಂತೆ ಏಳು ಜನರನ್ನು ಈಗಾಗಲೇ ಬಂಧಿಸಲಾಗಿದೆ.

 ಇಷ್ಟರಲ್ಲೇ ಕಥೆ ಮುಗಿಯಲಿಲ್ಲ, ಈಗ ಆಯುಷಿಯ ಸೋದರಮಾವ ರಾಕೇಶ್ ಶರ್ಮಾ ಅವರು ಪೊಲೀಸರು ಮತ್ತು ನ್ಯಾಯಾಲಯದ ಮೊರೆ ಹೋಗಿದ್ದು, ಆಯುಷಿ ತನ್ನ ತಂದೆಯನ್ನೂ ಸಹ ಕೊಲೆ ಮಾಡಿದ್ದಾಳೆ ಎಂದು ದೂರು ನೀಡಿದ್ದಾರೆ. ಕಳೆದ ವರ್ಷ ಆಯುಷಿಯ ತಂದೆ ಅನಾರೋಗ್ಯಕ್ಕೆ ಒಳಗಾಗಿದ್ದಾಗ ಅವರಿಗೆ ಸರಿಯಾದ ಚಿಕಿತ್ಸೆ ಸಿಗದಂತೆ ಆಯುಷಿ ತಡೆದಿದ್ದಳು. ಚಿಕಿತ್ಸೆ ಕೊಡಿಸುವುದಾಗಿ ಸುಳ್ಳು ಹೇಳಿ ಮೂರು ತಿಂಗಳ ಕಾಲ ತಂದೆಯನ್ನು ರಹಸ್ಯ ಸ್ಥಳದಲ್ಲಿ ಇರಿಸಿದ್ದಳು. ನಂತರ ತಂದೆಯ ದೇಹದ ಶೇಕಡಾ 90 ರಷ್ಟು ಭಾಗ ಹಾನಿಗೊಳಗಾದ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಿ, ಆಮೇಲೆ ಮನೆಗೆ ಕರೆತಂದು ಅವರ ಸಾವಿಗೆ ಕಾರಣವಾಗಿದ್ದಾಳೆ ಎಂದು ರಾಕೇಶ್ ಶರ್ಮಾ ಆರೋಪಿಸಿದ್ದಾರೆ.
 

ಒಮ್ಮೆ ತಾಯಿಯೊಂದಿಗೆ ಜಗಳವಾಡುವಾಗ, ಅಪ್ಪನಿಗೆ ಹಾಕಿದ್ದ ಫೀಡಿಂಗ್ ಟ್ಯೂಬ್ ಕಿತ್ತುಹಾಕಿ ಕೊಂದ ಹಾಗೆ ನಿನ್ನನ್ನು ಕೊಲ್ಲುವುದು ನನಗೆ ದೊಡ್ಡ ಕೆಲಸವಲ್ಲ ಎಂದು ಆಯುಷಿ ಬೆದರಿಕೆ ಹಾಕಿದ್ದಳು ಎಂಬುದನ್ನು ಸೋದರಮಾವ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ತಂದೆಯ ಸಾವಿನ ತಕ್ಷಣವೇ ಆಯುಷಿ ಆಸ್ತಿ ಪತ್ರಗಳನ್ನು ತನ್ನ ಹೆಸರಿಗೆ ವರ್ಗಾಯಿಸಲು ಮತ್ತು ಅವರ ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕಲು ಮುಂದಾಗಿದ್ದಳು ಎಂಬುದು ಈಗ ಹಲವು ಸಂಶಯಗಳಿಗೆ ಕಾರಣವಾಗಿದೆ. ಪ್ರಸ್ತುತ ತಾಯಿಯ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಆಯುಷಿ ಶರ್ಮಾಳನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ತಂದೆಯ ನಿಗೂಢ ಸಾವಿನ ಕುರಿತು ಸೋದರಮಾವ ನೀಡಿರುವ ದೂರಿನ ಅನ್ವಯ ಪೊಲೀಸರು ಈಗ ಹೊಸದಾಗಿ ತನಿಖೆ ಆರಂಭಿಸಿದ್ದಾರೆ. ಕಾನೂನು ವಿದ್ಯಾರ್ಥಿನಿಯೇ ಈ ಮಟ್ಟದ ಅಪರಾಧ ಎಸಗಿರುವುದು ಜೈಪುರದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.