2026-07-11 11:35:00

HD KUMARASWAMY | ಮೈಸೂರಿಗೆ ಕಂಬಳ ತಂದರೆ ದೈವಿಕ ಪರಂಪರೆ ಪಾವಿತ್ರ್ಯತೆಗೆ ಧಕ್ಕೆ ಹೆಚ್​​​​​ಡಿಕೆ | SNK

HD KUMARASWAMY | ಮೈಸೂರಿಗೆ ಕಂಬಳ ತಂದರೆ ದೈವಿಕ ಪರಂಪರೆ ಪಾವಿತ್ರ್ಯತೆಗೆ ಧಕ್ಕೆ ಹೆಚ್​​​​​ಡಿಕೆ  | SNK

ಬೆಂಗಳೂರು: ನಾಡಹಬ್ಬ ಮೈಸೂರು ದಸರಾದಲ್ಲಿ ಕರಾವಳಿ ಭಾಗದ ಜನಪದ ಹಾಗೂ ಪ್ರಸಿದ್ಧ ಕ್ರೀಡೆ ಕಂಬಳ ಆಯೋಜನೆ ಕುರಿತು ಈಗಾಗಲೇ ಪರ-ವಿರೋಧಗಳು ವ್ಯಕ್ತವಾಗುತ್ತಿದ್ದು, ಇದೀಗ ರಾಜಕೀಯ ಜಟಾಪಟಿಗೂ ಕಾರಣವಾಗಿದೆ. ದಸರಾದಲ್ಲಿ ಕಂಬಳ ಆಯೋಜನೆ ಬೇಡವೆಂದು ಸಂಸದ ಯದುವೀರ್ ಒಡೆಯರ್ ಅವರು ತಿಳಿಸಿದ್ದಾರೆ.  ಈ ಕುರಿತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಬೆಂಬಲ ನೀಡಿದ್ದು, ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಪರಂಪರಾಗತವಾಗಿ ತನ್ನದೇ ಆದ ವೈಶಿಷ್ಟ್ಯದಿಂದ ಕಂಗೊಳಿಸುತ್ತಿರುವ ಮೈಸೂರು ದಸರಾ ಉತ್ಸವದಲ್ಲಿ ಕಂಬಳವನ್ನು ಸೇರಿಸುವ ಅಗತ್ಯವಿಲ್ಲ. ಈವರೆಗೂ ನಡೆದುಕೊಂಡು ಬಂದಿರುವ ದಸರಾಕ್ಕೆ ಧಕ್ಕೆ ತರುವ ಪ್ರಯತ್ನ ಖಂಡಿತ ಬೇಡ ಎಂದು ಸರ್ಕಾರಕ್ಕೆ ಕುಮಾಸ್ವಾಮಿ ಅವರು ತಿಳಿಸಿದ್ದಾರೆ.

ಕಂಬಳವು ಕರಾವಳಿ ಭಾಗದ ಸಾಂಸ್ಕೃತಿಕ ಶ್ರೇಷ್ಠತೆ ಮತ್ತು ನಂಬಿಕೆಯ ಪ್ರತೀಕ. ಭೌಗೋಳಿಕವಾಗಿ ಆ ಭಾಗಕ್ಕೆ ಮಾತ್ರ ಸರಿಹೊಂದುವ ಆಚರಣೆಯೂ ಹೌದು. ಅದನ್ನು ಮೈಸೂರಿಗೆ ತಂದು ದೈವಿಕ ಹಿನ್ನೆಲೆಯ ಆ ಪರಂಪರೆ, ಪಾವಿತ್ರ್ಯತೆಗೆ ಧಕ್ಕೆ ತರುವುದನ್ನು ಒಪ್ಪಲಾಗದು. ಕರಾವಳಿ ಪ್ರದೇಶ ಹಸಿರು ಮತ್ತು ನೀರಿನ ಸಂಗಮ. ಇಂಥ ಪ್ರಾಕೃತಿಕ ಹಿನ್ನೆಲೆಯಲ್ಲಿ ಕಂಬಳವನ್ನು ಕಣ್ತುಂಬಿಕೊಳ್ಳುವುದೇ ಧನ್ಯತೆಯ ಅನುಭವ. ಹೀಗಾಗಿ ಮೈಸೂರು ಮತ್ತು ಕರಾವಳಿ ಜನರ ಭಾವನೆಗಳಿಗೆ ನೋವುಂಟು ಮಾಡುವುದು ಬೇಕಿಲ್ಲ ಎಂದು ಹೆಚ್​​​ಡಿಕೆ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಲ್ಲಿ ಕಂಬಳ ಬೇಡ ಎಂದ ಪ್ರತಾಪ್ ಸಿಂಹ

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆಯ ಅವಶ್ಯಕತೆ ಇಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು. 'ದಸರಾ ಮಹೋತ್ಸವದಲ್ಲಿ ಕಂಬಳ ಬೇಡ ಎಂದು ನಮ್ಮ ಸಂಸದ ಯದುವೀರ್ ಒಡೆಯರ್ ಅವರು ತಳೆದಿರುವ ಸ್ಪಷ್ಟ ನಿಲುವನ್ನು ನಾನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ರಾವಳಿಯ ಕಂಬಳ, ಮೈಸೂರಿನ ದಸರಾ ಅಥವಾ ಸವದತ್ತಿ ಎಲ್ಲಮ್ಮನ ಜಾತ್ರೆ ಹೀಗೆ ಪ್ರತಿಯೊಂದಕ್ಕೂ ತನ್ನದೇ ಆದ ಘನತೆ ಮತ್ತು ಐತಿಹಾಸಿಕ ಹಿನ್ನೆಲೆಯಿದೆ. ನಮಗೆ ಕಂಬಳದ ಬಗ್ಗೆ ಅತೀವ ಗೌರವವಿದೆ. ಆದರೆ, ಮೈಸೂರು ದಸರಾ ಆಚರಣೆಯ ವೈಭವ ಮತ್ತು ಅದರ ಸಾಂಪ್ರದಾಯಿಕ ಚೌಕಟ್ಟೇ ಬೇರೆಯಾಗಿದೆ. ನಮ್ಮದೇ ಆದ ವಿಶಿಷ್ಟ ಪರಂಪರೆಯನ್ನು ಹೊಂದಿರುವ ದಸರಾದೊಳಗೆ ಹೊರಗಿನ ಸಂಸ್ಕೃತಿಯನ್ನು ಕೃತಕವಾಗಿ ತುರುಕುವ ಅಗತ್ಯವಿಲ್ಲ' ಎಂದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.