2026-07-14 07:15:19

KARNATAKA MINISTER PRIYANK KHARGE | ಕೆಪಿಎಸ್ಸಿ ಅಕ್ರಮ ನಿಯಂತ್ರಣಕ್ಕೆ ಹೊಸ ಕಾಯ್ದೆಯ ಅಸ್ತ್ರ ಸಚಿವ ಪ್ರಿಯಾಂಕ್ ಖರ್ಗೆ! | SNK

KARNATAKA MINISTER PRIYANK KHARGE | ಕೆಪಿಎಸ್ಸಿ ಅಕ್ರಮ ನಿಯಂತ್ರಣಕ್ಕೆ ಹೊಸ ಕಾಯ್ದೆಯ ಅಸ್ತ್ರ ಸಚಿವ ಪ್ರಿಯಾಂಕ್ ಖರ್ಗೆ! | SNK

ಕರ್ನಾಟಕ ಲೋಕಸೇವಾ ಆಯೋಗದ (KPSC) ವಿಶ್ವಾಸಾರ್ಹತೆ ಕಳೆದುಹೋಗಿರುವ ಬೆನ್ನಲ್ಲೇ, ಇಡೀ ನೇಮಕಾತಿ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಿಸಲು ಸರ್ಕಾರ ಬಿಗ್ ಪ್ಲಾನ್ ಮಾಡಿದೆ. ಕೆಪಿಎಸ್‌ಸಿಗೆ ಹೊಸ ಕಾನೂನು ತರುವ ಕುರಿತು ವಿಧಾನಮಂಡಲ ಅಧಿವೇಶನದಲ್ಲಿ ಸತತ ಮೂರು ದಿನಗಳ ಕಾಲ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಸುದೀರ್ಘ ಚರ್ಚೆ ನಡೆದಿದೆ.  ಈ ವಿಚಾರವಾಗಿ ಅತ್ಯಂತ ಮಹತ್ವದ ಹೇಳಿಕೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಕೆಪಿಎಸ್‌ಸಿಯಲ್ಲಿನ ಭ್ರಷ್ಟಾಚಾರಕ್ಕೆ ಶಾಶ್ವತ ಮುಕ್ತಿ ಹಾಡಲು ಸಂವಿಧಾನಾತ್ಮಕ ತಿದ್ದುಪಡಿ ತರಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ. ವ್ಯವಸ್ಥೆಯಲ್ಲಿ ಬದಲಾವಣೆ ತರಲು ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ನಾಯಕರಿಬ್ಬರ ಆಶಯವೂ ಒಂದೇ ಆಗಿದೆ ಎಂದ ಸಚಿವರು, ಈ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಕೇಂದ್ರ ಸರ್ಕಾರಕ್ಕೆ ಜಂಟಿಯಾಗಿ ಮನವಿ ಸಲ್ಲಿಸಬೇಕು ಎಂದರು. ನಾವು ತಿದ್ದುಪಡಿ ತರಲು ಕಾನೂನಿನ ಸಾಧಕ-ಬಾಧಕಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಹೆಜ್ಜೆ ಇಡುವುದು ಸೂಕ್ತ. ಪ್ರಸ್ತುತ ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗಳ ಬಗ್ಗೆ ಯುವಕರಲ್ಲಿ ಹಾಗೂ ಸಾರ್ವಜನಿಕರಲ್ಲಿ ಸಾಕಷ್ಟು ಅನುಮಾನಗಳು ಮತ್ತು ಆತಂಕ ಸೃಷ್ಟಿಯಾಗಿದೆ. ಈ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಮರುಸ್ಥಾಪಿಸಲು ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ" ಎಂದು ಕರೆ ನೀಡಿದರು.

ಕೇಂದ್ರದ ಪರೀಕ್ಷೆಗಳಲ್ಲೂ ಭ್ರಷ್ಟಾಚಾರ; ದೇಶಾದ್ಯಂತ ನಂಬಿಕೆಯ ಕೊರತೆ

ಕೇವಲ ರಾಜ್ಯದ ಪರೀಕ್ಷೆಗಳು ಮಾತ್ರವಲ್ಲದೆ ದೇಶದ ಪ್ರತಿಷ್ಠಿತ ಪರೀಕ್ಷಾ ಮಂಡಳಿಗಳಾದ ಸಿಬಿಎಸ್‌ಇ (CBSE), ನೀಟ್ (NEET) ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳೂ ಸೋರಿಕೆಯಾಗಿವೆ. ರೈಲ್ವೆ ಇಲಾಖೆಯ ಪರೀಕ್ಷೆಗಳಲ್ಲೂ ಇಂತಹದ್ದೇ ಅಕ್ರಮಗಳು ನಡೆದಿವೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು. ಇವತ್ತು ದೇಶದ ಪ್ರಮುಖ ನೇಮಕಾತಿ ಮತ್ತು ಶೈಕ್ಷಣಿಕ ಸಂಸ್ಥೆಗಳ ಮೇಲೆಯೇ ಸಾರ್ವಜನಿಕರಿಗೆ ನಂಬಿಕೆಯ ಕೊರತೆ ಎದ್ದು ಕಾಣುತ್ತಿದೆ. ಇಡೀ ದೇಶದ ಯುವ ಸಮೂಹದ ಭವಿಷ್ಯದ ದೃಷ್ಟಿಯಿಂದ ಪಕ್ಷ ಭೇದ ಮರೆತು ಎಲ್ಲರೂ ಒಟ್ಟಾಗಿ ಕಠಿಣ ಕಾನೂನು ರೂಪಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯವೂ ಹೌದು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ಗವರ್ನರ್ ಆದೇಶಕ್ಕೆ ಪ್ರಿಯಾಂಕ್ ಬೆಂಬಲ!

ಇದೇ ವೇಳೆ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರ್ ಸಾಹುಕಾರ್ ಅಮಾನತು ವಿಚಾರವಾಗಿ ಮಾತನಾಡಿದ ಸಚಿವರು, ಯಾವುದೇ ಒಬ್ಬ ಅಧಿಕಾರಿ, ವ್ಯಕ್ತಿ ಅಥವಾ ಸಾಂಸ್ಥಿಕ ಮುಖ್ಯಸ್ಥರ ಮೇಲೆ ಭ್ರಷ್ಟಾಚಾರದ ಅನುಮಾನಗಳು ವ್ಯಕ್ತವಾದಾಗ, ಅವರು ಸ್ವಪ್ರೇರಣೆಯಿಂದ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಹೇಳಿದರು. ಅಷ್ಟೇ ಅಲ್ಲದೆ, ತನಿಖೆಗೆ ಸಂಪೂರ್ಣ ಸಹಕಾರ ನೀಡಿ, ತಾವು ದೋಷಮುಕ್ತರೆಂದು ಸಾಬೀತಾದ ಬಳಿಕ ಮರಳಿ ಅಧಿಕಾರ ವಹಿಸಿಕೊಳ್ಳುವುದು ನೈತಿಕತೆಯಾಗಿದೆ. ಆದರೆ, ಆಯೋಗದ ಎಲ್ಲಾ ಸದಸ್ಯರು ವಜಾ ಮಾಡಬೇಕು ಎಂದು ಒತ್ತಾಯಿಸುತ್ತಿದ್ದರೂ, 'ನಾನೇ ಕುರ್ಚಿಯಲ್ಲಿ ಇರುತ್ತೇನೆ' ಎಂದು ಹಠ ಹಿಡಿಯುವುದು ಯಾವುದೇ ರೀತಿಯಲ್ಲೂ ಸರಿಯಲ್ಲ ಎಂದು ಸಾಹುಕಾರ್ ಅವರ ನಿಲುವನ್ನು ಖಂಡಿಸಿದರು. ರಾಜ್ಯಪಾಲರು ನಿಯಮಾವಳಿಗಳ ಪ್ರಕಾರವೇ ವಜಾ ಮಾಡುವ ಆದೇಶ ಹೊರಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಗೊಂದಲಗಳು ಮರುಕಳಿಸದಂತೆ ವ್ಯವಸ್ಥೆಯನ್ನು ಸರಿಪಡಿಸಬೇಕಿದೆ. ಯುವಕರ ಭವಿಷ್ಯದ ಜೊತೆ ಚಿಲ್ಲರೆ ರಾಜಕಾರಣ ಮಾಡುವ ಯಾವುದೇ ಸಂಸ್ಥೆಯನ್ನು ಸರ್ಕಾರ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಬಡ ವಿದ್ಯಾರ್ಥಿಗಳ ಕಣ್ಣೀರಿಗೆ ಬೆಲೆ ಕೊಡದಿದ್ದರೆ ಹೇಗೆ?

ರಾಜ್ಯದ ಬಡ ಯುವಕರು ಸರ್ಕಾರಿ ನೌಕರಿಯ ಕನಸು ಹೊತ್ತು ಪಡುವ ಕಷ್ಟಗಳನ್ನು ಪ್ರಿಯಾಂಕ್ ಖರ್ಗೆ ಈ ಸಂದರ್ಭದಲ್ಲಿ ನೆನಪಿಸಿಕೊಂಡರು. "ಗ್ರಾಮೀಣ ಭಾಗದ ಯುವಕರು ಸಾಲಸೋಲ ಮಾಡಿ, ತಂದೆ-ತಾಯಿಯ ದುಡ್ಡು ಖರ್ಚು ಮಾಡಿಕೊಂಡು ಹುಬ್ಬಳ್ಳಿ, ಹೈದರಾಬಾದ್‌ನಂತಹ ನಗರಗಳಿಗೆ ಹೋಗಿ ಹಗಲು-ರಾತ್ರಿ ಎನ್ನದೆ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳುತ್ತಾರೆ. ಒಂದು ಸರ್ಕಾರಿ ನೌಕರಿ ಸಿಕ್ಕರೆ ತಮ್ಮ ಕುಟುಂಬಕ್ಕೆ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ಸಿಗುತ್ತದೆ ಎಂಬ ಆಸೆಯಿಂದ ಓದುತ್ತಾರೆ. ಇಂತಹ ಕಷ್ಟಪಡುವ ಯುವಕರ ಭವಿಷ್ಯದ ಜೊತೆ ವ್ಯವಸ್ಥೆ ಚೆಲ್ಲಾಟವಾಡುವುದು ನಿಜಕ್ಕೂ ವಿಷಾದನೀಯ ಮತ್ತು ಇದು ಒಳ್ಳೆಯ ಬೆಳವಣಿಗೆಯಲ್ಲ. ಯುವಕರ ಭವಿಷ್ಯವನ್ನು ಬಲಪಡಿಸಲು ಕೆಪಿಎಸ್‌ಸಿಯನ್ನು ಸಂಪೂರ್ಣವಾಗಿ ನವೀಕರಿಸಿ, ಬಲವರ್ಧನೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ" ಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.