ನವದೆಹಲಿ: ಇಂದು ಮತ್ತೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗಿದೆ. ಪೆಟ್ರೋಲ್ ದರ ಲೀಟರ್‌ಗೆ ರೂ.2.61 ಹಾಗೂ ಡೀಸೆಲ್ ದರ ರೂ.2.71 ಹೆಚ್ಚಿಸಲಾಗಿದ್ದು, ಹನ್ನೊಂದು ದಿನಗಳಲ್ಲಿ ನಾಲ್ಕು ಬಾರಿ ದರ ಏರಿಕೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ರೂ. 110.93 ರಷ್ಟಿದ್ದರೆ ಡೀಸೆಲ್ ದರ ಪ್ರತಿ ಲೀಟರ್ ಗೆ ರೂ.98.45 ರಷ್ಟಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಕೆಯಾಗುತ್ತಿದ್ದು, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಮೇ 15ರಿಂದ ಬೆಲೆ ಹೆಚ್ಚಳ ಮಾಡುತ್ತಿವೆ. ಈ ಮೂಲಕ ಹನ್ನೊಂದು ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಪ್ರತಿ ಲೀಟರ್ ಗೆ ರೂ.7.5ರಷ್ಟು ಹೆಚ್ಚಳವಾಗಿದೆ.
ಮೇ 15ರಂದು ಮೊದಲ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ತಲಾ ರೂ.3ರಷ್ಟು ಹೆಚ್ಚಿಸಲಾಗಿತ್ತು. ಮೇ 19ರಂದು 90 ಪೈಸೆ ಏರಿಕೆ ಮತ್ತು ಮೇ 23ರಂದು ಮತ್ತೆ ಪೆಟ್ರೋಲ್ 87 ಪೈಸೆ ಮತ್ತು ಡೀಸೆಲ್ 91 ಪೈಸೆ ಹೆಚ್ಚಿಸಲಾಗಿತ್ತು. ರಾಜ್ಯ ಸರ್ಕಾರಗಳು ತಮ್ಮದೇ ಆದ ತೆರಿಗೆ ವಿಧಿಸುತ್ತಿರುವುದರಿಂದ ಪ್ರತಿ ರಾಜ್ಯದಲ್ಲೂ ದರದಲ್ಲಿ ವ್ಯತ್ಯಾಸ ಇರುತ್ತದೆ.
ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ಸಾರಿಗೆ ವೆಚ್ಚ, ಆಹಾರ ವಸ್ತುಗಳ ಬೆಲೆ, ಕೈಗಾರಿಕಾ ಉತ್ಪಾದನಾ ವೆಚ್ಚ ಹೆಚ್ಚುತ್ತದೆ. ಇದರಿಂದ ಸಹಜವಾಗಿಯೇ ಎಲ್ಲ ಸೇವೆ ಮತ್ತು ಸರಕುಗಳ ಬೆಲೆ ಹೆಚ್ಚಾಗುತ್ತದೆ. ಈ ಬೆಲೆ ಏರಿಕೆಯಿಂದ ವಿಶೇಷವಾಗಿ ಬಡ ಮತ್ತು ಮಧ್ಯಮ ವರ್ಗದ ಜನರ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತದೆ.