ಬೆಳಗಾವಿ: ಪ್ರತಿಷ್ಠಿತ ಕೆಎಲ್ಇ ಸಂಸ್ಥೆಯಲ್ಲಿ ಕಳೆದ 40 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಖ್ಯಾತ ವೈದ್ಯ ಡಾ.ದಿನೇಶ್ ಭಟ್ಕಳ ಅವರು, ಇಲ್ಲಿನ ಮಂಡೋಳಿ ರಸ್ತೆಯಲ್ಲಿರುವ ತಮ್ಮ ಮನೆಯಲ್ಲಿ ಇಂದು ಬೆಳಿಗ್ಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಶ್ವಾಸಕೋಶ ಕ್ಯಾನ್ಸರಿನಿಂದ ಬಳಲುತ್ತಿದ್ದರು.
ಮೂಲತಃ ಅಂಕೋಲಾದವರಾದ ಅವರು ಅಂಕೋಲಾದಲ್ಲಿರುವ ಕೆಎಲ್ಇ ಸಂಸ್ಥೆಯ ಆಸ್ಪತ್ರೆಯ ಆಡಳಿತಾಧಿಕಾರಿಯಾಗಿದ್ದರು. ಇತ್ತೀಚೆಗೆ ಬೆಳಗಾವಿಯ ಮನೆಗೆ ಬಂದು ನೆಲೆಸಿದ್ದರು. ಇವರಿಗೆ ಕೆಎಲ್ಇ ಆಸ್ಪತ್ರೆ ವೈದ್ಯರೇ ಚಿಕಿತ್ಸೆ ನೀಡುತ್ತಿದ್ದರು.
ಶುಕ್ರವಾರ ಬೆಳಿಗ್ಗೆ ತಮ್ಮ ಮನೆಯ ಗ್ಯಾಲರಿಗೆ ಹೋಗಿ ಪಿಸ್ತೂಲಿನಿಂದ ತಲೆಗೆ ಗುಂಡು ಹಾರಿಸಿಕೊಂಡಿದ್ದಾರೆ. ಅನಾರೋಗ್ಯ ತಅಳಲಾರದೆ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಸಾವಿಗೂ ಮುನ್ನ ಕೆಎಲ್ಇ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರ ವಾಟ್ಸ್ಆ್ಯಪ್‌ಗೆ ಮೆಸೇಜ್ ಮಾಡಿದ್ದಾರೆ. ನನಗೆ ನೀವು ಇಷ್ಟು ವರ್ಷಗಳ ಕಾಲ ಸಾಕಷ್ಟು ಸಹಾಯ ಮಾಡಿದ್ದೀರಿ. ಆದರೆ ನಾನು ತೀವ್ರವಾದ ಎದೆ ನೋವಿನಿಂದ ಬಳಲುತ್ತಿದ್ದೇನೆ. ಆದ್ದರಿಂದ ನಾನು ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಿರುವೆ. ಇದು ನನ್ನ ಸ್ವಂತ ನಿರ್ಧಾರ. ದಯವಿಟ್ಟು ನೀವು ನನ್ನ ಕುಟುಂಬಕ್ಕೆ ಸಹಾಯ ಮಾಡಿ ಹಾಗೂ ನಗರ ಪೊಲೀಸ್ ಆಯುಕ್ತರಿಗೂ ಮಾಹಿತಿ ನೀಡಿ ಎಂದು ಸಂದೇಶ ಕಳುಹಿಸಿದ್ದಾರೆ.
ಜತೆಗೆ ತಮಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯ ಡಾ. ಕೆರೂರ ಅವರಿಗೂ ಮೆಸೇಜ್ ಮಾಡಿದ್ದಾರೆ. ಇದರ ಸ್ಕ್ರೀನ್ ಶಾಟ್ ಗಳು ಪೊಲೀಸರಿಗೆ ಲಭ್ಯವಾಗಿವೆ.