ಬೆಂಗಳೂರು: ಹವಾಮಾನ ಬದಲಾವಣೆ ಮತ್ತು ಅಂತರ್ಜಲದ ಅತಿಯಾದ ಬಳಕೆಯಿಂದ ಭವಿಷ್ಯದಲ್ಲಿ ಎದುರಾಗಬಹುದಾದ ಜಲಕ್ಷಾಮವನ್ನು ತಪ್ಪಿಸಲು ಶಾಲಾ ಹಂತದಲ್ಲೇ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯ. ಈ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (NCERT) ಪಠ್ಯಕ್ರಮದಲ್ಲಿ 'ಅಂತರ್ಜಲ' ಕುರಿತ ಪ್ರತ್ಯೇಕ ಅಧ್ಯಾಯವನ್ನು ಅಳವಡಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಭೋಸರಾಜು ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು, ಪ್ರಸ್ತುತ ಎನ್‌ಸಿಇಆರ್‌ಟಿ 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ 'ಜಲ ಸಂಪನ್ಮೂಲಗಳು' ಎಂಬ ಅಧ್ಯಾಯವಿದ್ದರೂ, ಅದರಲ್ಲಿ ಕೇವಲ ಮೇಲ್ಮೈ ಜಲಕ್ಕೆ (Surface Water) ಮಾತ್ರ ಹೆಚ್ಚಿನ ಒತ್ತು ನೀಡಲಾಗಿದೆ.
ಭೂಮಿಯ ಮೇಲಿರುವ ಒಟ್ಟು ದ್ರವರೂಪದ ಸಿಹಿನೀರಿನಲ್ಲಿ ಶೇ. 97ರಷ್ಟು ಪಾಲು ಅಂತರ್ಜಲದ ರೂಪದಲ್ಲಿದೆ. ದೇಶದ ಶೇ. 50ರಷ್ಟು ಗೃಹಬಳಕೆ ಹಾಗೂ ಶೇ. 25ರಷ್ಟು ಕೃಷಿಯು ನೀರಿಗಾಗಿ ಅಂತರ್ಜಲವನ್ನೇ ಅವಲಂಬಿಸಿದೆ. ಪ್ರತಿ ವರ್ಷ ನೀರಿನ ಬಳಕೆಯು ಶೇ. 1 ರಷ್ಟು ಹೆಚ್ಚಾಗುತ್ತಿದ್ದು, ಹವಾಮಾನ ಬದಲಾವಣೆಯಿಂದಾಗಿ ಮೇಲ್ಮೈ ಜಲದ ಲಭ್ಯತೆ ಕಡಿಮೆಯಾಗುತ್ತಿರುವುದರಿಂದ ಅಂತರ್ಜಲದ ಮೇಲಿನ ಅವಲಂಬನೆ ಇನ್ನಷ್ಟು ತೀವ್ರವಾಗಲಿದೆ. ಅಲ್ಲದೇ, ಕಳೆದ ಎರಡು ದಶಕಗಳಲ್ಲಿ ಅತಿ-ಬಳಕೆಯ ಮತ್ತು ಅಪಾಯಕಾರಿ ಮಟ್ಟದಲ್ಲಿರುವ ಅಂತರ್ಜಲ ಪ್ರದೇಶಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಜೊತೆಗೆ, ಅಂತರ್ಜಲ ಕಲುಷಿತಗೊಳ್ಳುತ್ತಿರುವ ಬೆನ್ನಲ್ಲೇ ಅಂತರ್ಜಲದ ಗುಣಮಟ್ಟವೂ ನಿರಂತರವಾಗಿ ಕುಸಿಯುತ್ತಿದೆ.
ವಿಶ್ವಸಂಸ್ಥೆಯ 169 ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ) 53 ಗುರಿಗಳು ನೇರವಾಗಿ ಅಂತರ್ಜಲಕ್ಕೆ ಸಂಬಂಧಿಸಿದಂತಾಗಿವೆ. ಅಮೆರಿಕದ ಶಾಲಾ ಪಠ್ಯದಲ್ಲಿಯೇ ಅಂತರ್ಜಲ, ಅದರ ಇಂಗುವಿಕೆ, ಪೆರ್ಮಿಯಬಲಿಟಿ, ಅಂತರ್ಜಲ ಹರಿವು ಹಾಗೂ ಕಲುಷಿತಗೊಳ್ಳುವಿಕೆ ಕುರಿತು ವಿವರಿಸುವ ಪ್ರತ್ಯೇಕ ಅಧ್ಯಾಯವನ್ನು ಅಳವಡಿಸಲಾಗಿದೆ. ಇದೇ ಮಾದರಿಯಲ್ಲಿ ನಮ್ಮ ದೇಶದಲ್ಲೂ ಭವಿಷ್ಯದ ಪೀಳಿಗೆಗೆ ಅಂತರ್ಜಲ ಸಂಪನ್ಮೂಲದ ಲಭ್ಯತೆ ಹಾಗೂ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಲು ಪ್ರೌಢಶಾಲಾ ಹಂತದಲ್ಲಿಯೇ ಈ ವಿಷಯಗಳ ಸೇರ್ಪಡೆ ಅತ್ಯಗತ್ಯವಾಗಿದೆ ಎಂದು ಪತ್ರದಲ್ಲಿ ಮನವರಿಕೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.