ಬೆಂಗಳೂರು: ಭಾನುವಾರ ಬೆಂಗಳೂರಿನಲ್ಲಿ ಅತಿದೊಡ್ಡ ಡಿಜಿಟಲ್ ಅರೆಸ್ಟ್ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ವೃದ್ಧ ಶಿಕ್ಷಕಿಯನ್ನು ಗುರಿಯಾಗಿಸಿಕೊಂಡು ಡಿಜಿಟಲ್ ಅರೆಸ್ಟ್ ಮಾಡಿ ರೂ. 24 ಕೋಟಿ ಕಬಳಿಸಿದ್ದ ವಂಚಕರನ್ನು ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿವಿಧ ರಾಜ್ಯಗಳ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹರಿಯಾಣದ ಗುರುಗ್ರಾಮದಲ್ಲಿ ಕಚೇರಿ ಮಾಡಿಕೊಂಡಿದ್ದ ಈ ತಂಡ ಕರ್ನಾಟಕದಲ್ಲೂ ಕಾರ್ಯಾಚರಣೆಗೆ ಇಳಿದಿತ್ತು. ಬ್ಯಾಂಕ್ಗಳ ಮೂಲಕ ಮಾಹಿತಿ ಪಡೆದುಕೊಂಡು ದೊಡ್ಡ ದೊಡ್ಡ ಉದ್ಯೋಗದಲ್ಲಿದ್ದು ನಿವೃತ್ತರಾದ ಹಹಿರಿಯ ನಾಗರೀಕರನ್ನೇ ಇವರು ಟಾರ್ಗೆಟ್ ಮಾಡುತ್ತಿದ್ದರು. ಹಣ ಬಂದ ನಂತರ ಹಲವು ಮ್ಯೂಲ್ ಖಾತೆಗಳಿಗೆ ಹಣ ವರ್ಗಾವಣೆ ಮಾಡುತ್ತಿದ್ದರು. ಸದ್ಯ ಆರೋಪಿಗಳ ಖಾತೆಗಳಲ್ಲಿದ್ದ 60 ಲಕ್ಷ ರೂ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಬೆಂಗಳೂರಿನ ಶಿವಾಜಿನಗರ ನಿವಾಸಿ ಲಕ್ಷ್ಮೀ ರಾಮಮೂರ್ತಿ ಎಂಬುವರಿಗೆ (74) ಇವರು ವಂಚಿಸಿದ್ದಾರೆ. ಹಣ ವರ್ಗಾವಣೆ ಹೆಸರಿನಲ್ಲಿ ತಿಂಗಳುಗಟ್ಟಲೆ ಡಿಜಿಟಲ್ ಅರೆಸ್ಟ್ ಮಾಡಿ ಬರೋಬ್ಬರಿ ರೂ.24 ಕೋಟಿ ವಂಚಿಸಿದ್ದಾರೆ.
ಲಕ್ಷ್ಮೀ ರಾಮಮೂರ್ತಿ ಅವರು ಈ ಹಿಂದೆ ದುಬೈನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿ ನಿವೃತ್ತಿಯಾಗಿದ್ದರು.
ಇವರು ಬೆಂಗಳೂರು ಮತ್ತು ಮುಂಬೈನಲ್ಲಿ ಇದ್ದ ಆಸ್ತಿಗಳನ್ನು ಮಾರಾಟ ಮಾಡಿ ಅಮೆರಿಕಾದಲ್ಲಿರುವ ತಮ್ಮ ಮಕ್ಕಳ ಜೊತೆ ನೆಲೆಸಲು ಉದ್ದೇಶಿಸಿದ್ದರು. ಇವರ ಖಾತೆಯಲ್ಲಿ ಅಪಾರ ಹಣ ಇರುವುದನ್ನು ಪತ್ತೆ ಹಚ್ಚಿದ್ದ ವಂಚಕರು ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ವಿಡಿಯೋ ಕರೆ ಮಾಡಿದ್ದಾರೆ. ಅಕ್ರಮ ಹಣ ವರ್ಗಾವಣೆ ಮಾಡಿದ್ದೀರಾ, ನಿಮ್ಮ ಬ್ಯಾಂಕ್ ಖಾತೆಯಲ್ಲಿನ ಹಣ ಮತ್ತು ನಿಮ್ಮ ಖಾತೆ ಅಕ್ರಮ ಹಣ ವರ್ಗಾವಣೆಗೆ ಬಳಕೆಯಾಗಿದೆ. ನೀವು ಯಾರ ಜೊತೆಯೂ ಮಾತನಾಡುವಂತಿಲ್ಲ ಎಂದು ಸೂಚಿಸಿ ಎಲ್ಲಾ ಹಣವನ್ನು ಪರಿಶೀಲನೆಗೆ ಕಳುಹಿಸಿ ಎಂದು ಆರ್‌ಟಿಜಿಎಸ್ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ಕಳೆದ ಜನವರಿಯಿಂದ ಮೇ ತಿಂಗಳವರೆಗೆ ನಿರಂತರವಾಗಿ ಹಂತ ಹಂತವಾಗಿ 24 ಕೋಟಿ ರೂ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದರು.
ನಂತರ ಮತ್ತಷ್ಟು ಹಣಕ್ಕಾಗಿ ವಂಚಕರು ಒತ್ತಡ ಹೇರಿದ್ದಾರೆ. ಅದಕ್ಕಾಗಿ ಮನೆಯಲ್ಲಿದ್ದ ಚಿನ್ನಾಭರಣ ಅಡವಿಡಲು ನಗರದ ಐಸಿಐಸಿಐ ಬ್ಯಾಂಕ್ ಶಾಖೆಗೆ ವೃದ್ಧೆ ತೆರಳಿದ್ದಾರೆ. ಆದರೆ, ಬ್ಯಾಂಕ್ ಸಿಬ್ಬಂದಿ ಅಷ್ಟೊಂದು ಪ್ರಮಾಣದ ಚಿನ್ನಾಭರಣ ಗಮನಿಸಿ, ತಕ್ಷಣ ಸಿಸಿಬಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಬ್ಯಾಂಕ್‌ಗೆ ಧಾವಿಸಿದ ಪೊಲೀಸರು, ಲಕ್ಷ್ಮೀ ಅವರನ್ನು ಪ್ರಶ್ನಿಸಿದಾಗ ‘ಡಿಜಿಟಲ್ ಅರೆಸ್ಟ್’ ಆಗಿರುವುದಾಗಿ ತಿಳಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು, ವಿದೇಶದಲ್ಲಿರುವ ಅವರ ಮಕ್ಕಳಿಗೆ ವಿಷಯ ತಿಳಿಸಿದ್ದಾರೆ. ಈ ಮೂಲಕ ರೂ.3 ಕೋಟಿ ವಂಚಕರ ಖಾತೆಗೆ ವರ್ಗಾವಣೆ ಆಗುವುದನ್ನು ತಡೆಯಲಾಗಿದೆ.
ತಕ್ಷಣ ಪೊಲೀಸರು ಆರ್‌ಟಿಜಿಎಸ್ ಮೂಲಕ ಹಣ ವರ್ಗಾವಣೆ ಮಾಡಿರುವ ಖಾತೆಗಳನ್ನು ಫ್ರೀಜ್ ಮಾಡಿದ್ದಾರೆ. ಬ್ಯಾಂಕ್ ಸಿಬ್ಬಂದಿ ಸಮಯಪ್ರಜ್ಞೆಯಿಂದಾಗಿ ವೃದ್ಧೆ ಮತ್ತಷ್ಟು ಹಣ ಕಳೆದುಕೊಳ್ಳುವುದು ತಪ್ಪಿದೆ.