2026-05-26 12:03:56

ಸರ್ಕಾರವೇ ಒದಗಿಸಲಿದೆ 108 ಆಂಬುಲೆನ್ಸ್ ಸೇವೆ;ಏನೆಲ್ಲಾ ಸುಧಾರಣೆಗಳಿವೆ? | Speed News Kannada

ಸರ್ಕಾರವೇ ಒದಗಿಸಲಿದೆ 108 ಆಂಬುಲೆನ್ಸ್ ಸೇವೆ;ಏನೆಲ್ಲಾ ಸುಧಾರಣೆಗಳಿವೆ?  | Speed News Kannada

ಬೆಂಗಳೂರು: ಇನ್ನು ಮುಂದೆ “ಒಂದು ಕರೆ ನಮಗೆ, ತುರ್ತು ಸೇವೆ ನಿಮಗೆ” ಎಂಬ ಘೋಷವಾಕ್ಯದ ಅಡಿಯಲ್ಲಿ 108 ಆಂಬುಲೆನ್ಸ್ ಸೇವೆಯನ್ನು ಸರ್ಕಾರವೇ ಒದಗಿಸಲಿದೆ. ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಕ್ರಮ ಕೈಗೊಂಡಿದೆ.

108 ಆರೋಗ್ಯ ಕವಚ ಆಂಬುಲೆನ್ಸ್ ಕಮಾಂಡ್ ಕಂಟ್ರೋಲ್ ಸೆಂಟರ್ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಸರ್ಕಾರ ಹೇಗೆ108 ಆಂಬುಲೆನ್ಸ್ ಸೇವೆ ಒದಗಿಸಲಿದೆ ಎಂದು ವಿವರಿಸಿದರು.

2008ರಲ್ಲಿ 108 ಆಂಬುಲೆನ್ಸ್ ಸೇವೆ ಪ್ರಾರಂಭಿಸಲಾಗಿತ್ತು. ಈವರೆಗೆ ಖಾಸಗಿ ಸಂಸ್ಥೆ ಇದನ್ನು ನಡೆಸುತ್ತಿತ್ತು. 2025-26ನೇ ಸಾಲಿನಬಜೆಟ್‌ ನಲ್ಲಿ ಮುಖ್ಯಮಂತ್ರಿಗಳು ಈ ಸೇವೆಯನ್ನು ಉನ್ನತೀಕರಣ ಮಾಡುವುದಾಗಿ ಘೋಷಿಸಿದ್ದರು. ಅದರಂತೆ ಸರ್ಕಾರವೇ ಈ ಯೋಜನೆಯನ್ನು ನಡೆಸಲಿದೆ ಎಂದು ಹೇಳಿದರು.

108 ಆಂಬುಲೆನ್ಸ್ ವ್ಯವಸ್ಥೆ ಹೇಗೆ ಕೆಲಸ ನಿರ್ವಹಿಸುತ್ತದೆ?
ವಿವಿಧ ರಾಜ್ಯಗಳು ಹಾಗೂ ಸಿಂಗಪೂರ್ ದೇಶದ ಆಂಬುಲೆನ್ಸ್ ವ್ಯವಸ್ಥೆಯನ್ನು ಅಧ್ಯಯನ ಮಾಡಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಆರಂಭದಲ್ಲಿ ಈ ವ್ಯವಸ್ಥೆಯನ್ನು ಚಾಮರಾಜನಗರದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ಸರ್ಕಾರಿ ಸ್ವಾಮ್ಯದ ಸಿ-ಡಾಕ್ ಸಂಸ್ಥೆ ಇದಕ್ಕೆ ಬೇಕಾದ ಸಾಫ್ಟ್‌ವೇರ್ ಸಿದ್ಧಪಡಿಸಿದೆ. ಸುಸಜ್ಜಿತ 24/7 ಕಮಾಂಡ್ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ. ಈಗಿನ ಸುಧಾರಿತ ವ್ಯವಸ್ಥೆಯಲ್ಲಿ ಆಂಬುಲೆನ್ಸ್ ಟ್ರಾಕಿಂಗ್ ವ್ಯವಸ್ಥೆ ಇದೆ. ಆಂಬುಲೆನ್ಸ್‌ನಿಂದಲೇ MDT ಸಾಧನದ ಮೂಲಕ ತುರ್ತು ಸಂದರ್ಭದಲ್ಲಿ ವೈದ್ಯರನ್ನು ಸಂಪಕಿಸಬಹುದು ಮತ್ತು ಆಸ್ಪತ್ರೆಗೂ ಸಂದೇಶ ನೀಡಿ, ಸಕಲ ಸಿದ್ಧತೆ ಮಾಡಿಕೊಳ್ಳಲು ತಿಳಿಸಬಹುದಾಗಿದೆ. ರೋಗಿಯ ಸ್ಥಿತಿಯನ್ನು ಆಧರಿಸಿ ಯಾವ ಆಸ್ಪತ್ರೆ ಸೂಕ್ತ ಎಂದು ಅಲ್ಲಿಗೇ ಕಳುಹಿಸಲು ಸಾಧ್ಯವಾಗುತ್ತದೆ. ಫ್ಯೂಯಲ್ ಗೇಜ್ ಅಳವಡಿಸಿರುವುದರಿಂದ ಇಂಧನ ಬಳಕೆ ಮಾನಿಟರ್ ಮಾಡಲಾಗುವುದು ಎಂದು ವಿವರಿಸಿದರು.

ರಾಜ್ಯದ ಎಲ್ಲ ಆಂಬುಲೆನ್ಸ್‌ಗಳು ಈ ಯೋಜನೆಯ ವ್ಯಾಪ್ತಿಗೆ ಒಳಪಡುತ್ತವೆ. ಜತೆಗೆ ಟೆಲಿ ಮನಸ್ (ಇದು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಡಿ ಆರಂಭಿಸಲಾದ ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಸಹಾಯ ಕಾರ್ಯಕ್ರಮ), ಇ-ಸಂಜೀವಿನಿ, ಮಹಿಳಾ ಮತ್ತು ಮಕ್ಕಳ ಸಹಾಯವಾಣಿಯನ್ನು ಇದರೊಂದಿಗೆ ಜೋಡಿಸಲಾಗಿದೆ. ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ ಎಂದೂ ದಿನೇಶ್‌ ಗುಂಡೂರಾವ್‌ ಹೇಳಿದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.