2026-05-26 12:05:24

ರಾಜ್ಯಸಭೆಗೆ ಕಾಂಗ್ರೆಸ್‌ ನಿಂದ ಮೋಹನ್‌ ಕಾತರಕಿ; ಡಾ.ಅಂಜಲಿ ನಿಂಬಾಳ್ಕರ್‌ ಸಾಧ್ಯತೆ | Speed News Kannada

ರಾಜ್ಯಸಭೆಗೆ ಕಾಂಗ್ರೆಸ್‌ ನಿಂದ ಮೋಹನ್‌ ಕಾತರಕಿ; ಡಾ.ಅಂಜಲಿ ನಿಂಬಾಳ್ಕರ್‌ ಸಾಧ್ಯತೆ | Speed News Kannada

ಬೆಂಗಳೂರು: ರಾಜ್ಯಸಭಾ ಚುನಾವಣೆ ಜೂನ್‌ 18 ರಂದು ನಡೆಯಲಿದೆ. ಅಭ್ಯರ್ಥಿಗಳ ಆಯ್ಕೆಗೆ ಆಡಳಿತಾರೂಢ ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಜೆಡಿಎಸ್‌ ನ ಎಚ್.ಡಿ.ದೇವೇಗೌಡ ಬಿಜೆಪಿಯ ಕೆ ನಾರಾಯಣ ಮತ್ತು ಈರಣ್ಣ ಕಡಾಡಿ ನಿವೃತ್ತರಾಗುತ್ತಿದ್ದಾರೆ.

ನಾಲ್ಕು ಸ್ಥಾನಗಳ ಪೈಕಿ  ಅದರಲ್ಲೂ ಮೂವರನ್ನು ಮೇಲ್ಮನೆಗೆ ಕಳುಹಿಸುವ ಅವಕಾಶ ಇರುವ ಕಾಂಗ್ರೆಸ್‌ ನಲ್ಲಿ ಆಕಾಂಕ್ಷಿಗಳ ಪೈಪೋಟಿ ಹೆಚ್ಚಿದೆ. ಜಾತಿ, ಉತ್ತರ ಕರ್ನಾಟಕ ದಕ್ಷಿಣ ಕರ್ನಾಟಕ ಮಹಿಳೆ ಆಯ್ಕೆಯನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.  ಕಾಂಗ್ರೆಸ್‌ ಗೆ ಮೂವರನ್ನು ಆಯ್ಕೆ ಮಾಡುವ ಅವಕಾಶಗಳಿದ್ದರೂ ಸಿಎಂ ಬಣ, ಡಿಸಿಎಂ ಬಣ ಹೈಕಮಾಂಡ್‌ ಒಲವು ಹೀಗೆ ಗೋಜಲು ಗೋಜಲಾಗಿದೆ.

ಮುಂಬರುವ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ. ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ನಡುವೆಯೂ ಪೈಪೋಟಿ ಇದ್ದೇ ಇದೆ.

ಒಂದು ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಮರು ಆಯ್ಕೆಯಾಗುವುದು ಖಚಿತವಾಗಿದ್ದರೆ ಉಳಿದ ಸ್ಥಾನಗಳಿಗೆ ಪೈಪೋಟಿ ಇದೆ. ಸುಪ್ರೀಂಕೋರ್ಟ್‌ ಹಿರಿಯ ವಕೀಲ ಮೋಹನ್‌ ವಿ. ಕಾತರಕಿ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಇವರ ಆಯ್ಕೆಯ ಮೂಲಕ ಉತ್ತರ ಕರ್ನಾಟಕಕ್ಕೆ ಮತ್ತು ವೀರಶೈವ ಲಿಂಗಾಯತ ಸಮುದಾಯಗಳಿಗೆ ಅವಕಾಶ ಕೊಟ್ಟಂತಾಗುತ್ತದೆ ಎಂಬ ವಾದವೂ ಇದೆ.

ಮಹಿಳೆಯರಿಗೆ ಅವಕಾಶ ನೀಡಬೇಕೆಂಬ ವಾದವೂ ಇದೆ. ಮಹಿಳಾ ಕೋಟಾದಡಿಯಲ್ಲಿ ಖಾನಾಪುರ ಮಾಜಿ ಶಾಸಕಿ ಎಐಸಿಸಿ ವಕ್ತಾರೆ ಡಾ.ಅಜಲಿ ನಿಂಬಾಳ್ಕರ್‌ ಅವರ ಹೆಸರು ಮುಂಚೂಣಿಯಲ್ಲಿದೆ. ಸಂಸತ್ತಿನಲ್ಲಿ ಪಕ್ಷದ ಮಹಿಳಾ ಪ್ರಾತಿನಿಧ್ಯ ಶೇ.17 ರಷ್ಟಿದ್ದು ಮಹಿಳೆಯರಿಗೆ ಆದ್ಯತೆ ನೀಡಬೇಕು. ಶೇ.33 ಮೀಸಲಾತಿಗೆ ಹೋರಾಟ ನಡೆಸುತ್ತಿರುವಾಗ ಪಕ್ಷವೇ ಆದ್ಯತೆ ನೀಡದಿದ್ದರೆ ಹೇಗೆ ಎಂಬ ಚರ್ಚೆ ನಡೆಯುತ್ತಿದೆ. 2002 ರಲ್ಲಿ ಬೆಂಗಳೂರಿನ ಮಾಜಿ ಮೇಯರ್‌ ಪ್ರೇಮಾ ಕಾರ್ಯಪ್ಪ ಅವರನ್ನು ಹೊರತುಪಡಿಸಿದರೆ ಅಲ್ಲಿಂದೀಚೆಗೆ ನಡೆದ 12 ಚುನಾವಣೆಗಳಲ್ಲಿ ಯಾರೊಬ್ಬರೂ ಆಯ್ಕೆಯಾಗಿಲ್ಲ.

2015ರಲ್ಲಿ ಆಯ್ಕೆಯಾದ ಬಿ.ಕೆ. ಹರಿಪ್ರಸಾದ್‌ ಹೊರತುಪಡಿಸಿದರೆ ಒಬಿಸಿ ಸಮುದಾಯದಿಂದಲೂ ಯಾರೊಬ್ಬರನ್ನೂ ಆಯ್ಕೆ ಮಾಡಲಿಲ್ಲ. ಆದ್ದರಿಂದ ಈ ಬಾರಿ ದಲಿತ ಅಥವಾ ಒಬಿಸಿ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂಬ ಕೂಗು ಇದೆ. ಮಾಜಿ ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ. ಶ್ರೀನಿವಾಸ್‌ ಅವರ ಹೆಸರು ಮುಂಚೂಣಿಯಲ್ಲಿದೆ. ಎಐಸಿಸಿ ಮುಖಂಡರಾದ ಪವನ್‌ ಖೇರಾ ಮತ್ತು ಸುಪ್ರಿಯಾ ಶ್ರೀನಾಠೆ ಅವರ ಹೆಸರನ್ನೂ ತೇಲಿ ಬಬಿಡಲಾಗಿದೆ. ಕನ್ನಡೇತರರನ್ನು ಆಯ್ಕೆ ಮಾಡುವ ಸಾಧ್ಯತೆಗಳು ಕಡಿಮೆ.

ಬಿಜೆಪಿಯ ಒಂದು ಸ್ಥಾನಕ್ಕೆ ಮಾಜಿ ಪ್ರಧಾನಿ ದೇವೇಗೌಡ ಅವರು ಆಕಾಂಕ್ಷಿಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರ ಹೆಸರೂ ಕೇಳಿ ಬರುತ್ತಿದೆ. ಹೈಕಮಾಂಡ್‌ ಒಲವು ದೇವೇಗೌಡರ ಕಡೆಗಿದೆ ಎನ್ನಲಾಗುತ್ತಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.