2026-07-07 11:26:44

Bilawal Bhuttos bluster | ಭಾರತದ ವಿರುದ್ದ ಎಲ್ಲಾ ರಂಗದಲ್ಲಿ ಸೆಣೆಸಲು ಸಿದ್ದ ಬಿಲಾವಲ್‌ ಭುಟ್ಟೋ ಬೂಸಿ ಬೆದರಿಕೆ! | SNK

Bilawal Bhuttos bluster | ಭಾರತದ ವಿರುದ್ದ ಎಲ್ಲಾ ರಂಗದಲ್ಲಿ ಸೆಣೆಸಲು ಸಿದ್ದ ಬಿಲಾವಲ್‌ ಭುಟ್ಟೋ ಬೂಸಿ ಬೆದರಿಕೆ! | SNK

ಕರಾಚಿ : ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರವಾಗಿ ಭಾರತ ಮತ್ತು ಪಾಕಿಸ್ತಾನ ನಡುವೆ ಮತ್ತೆ ಉದ್ವಿಗ್ನತೆ ಹೆಚ್ಚಾಗಿದೆ. ಒಂದು ವೇಳೆ ಭಾರತವು ಸಿಂಧೂ ನದಿ ಒಪ್ಪಂದವನ್ನು ರದ್ದುಗೊಳಿಸಿ ಪಾಕಿಸ್ತಾನಕ್ಕೆ ಹರಿಯುವ ನೀರನ್ನು ನಿಲ್ಲಿಸಿದರೆ, ನಾವು ಭಾರತದ ವಿರುದ್ಧ ಯುದ್ಧ ಮಾಡಲು ಸಿದ್ಧ ಎಂದು ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಎಚ್ಚರಿಕೆ ನೀಡಿದ್ದಾರೆ.  ತಮ್ಮ ದೇಶವು ಎಲ್ಲಾ ರಂಗಗಳಲ್ಲೂ ಹೋರಾಡಲು ಸನ್ನದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಬೆನ್ನಲ್ಲೇ, ಭಾರತ ಸರ್ಕಾರವು 1960ರ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ತಾತ್ಕಾಲಿಕವಾಗಿ ಅಮಾನತ್ತಿನಲ್ಲಿಡಲು ನಿರ್ಧರಿಸಿತ್ತು. ಅಲ್ಲದೆ, ಈ ಐತಿಹಾಸಿಕ ಒಪ್ಪಂದವನ್ನು ಇನ್ನು ಮುಂದೆ ಎಂದಿಗೂ ಮರುಸ್ಥಾಪಿಸುವುದಿಲ್ಲ ಎಂದು ಭಾರತದ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದರು. ಭಾರತದ ಈ ಕಠಿಣ ನಿಲುವಿನಿಂದ ಕಂಗಾಲಾಗಿರುವ ಪಾಕಿಸ್ತಾನ ಈಗ ಯುದ್ಧದ ಮಾತುಗಳನ್ನಾಡುತ್ತಿದೆ.

ಸಿಂಧ್ ಪ್ರಾಂತ್ಯದ ಸಾಂಸ್ಕೃತಿಕ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಬಿಲಾವಲ್ ಭುಟ್ಟೋ, ಭಾರತವು ಪಾಕಿಸ್ತಾನದ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂದು ಆರೋಪಿಸಿದರು. ಸಿಂಧೂ ನದಿಯ ನೀರು ಪಾಕಿಸ್ತಾನಕ್ಕೆ ಸೇರಿದ್ದು, ಅದನ್ನು ಕಸಿದುಕೊಳ್ಳಲು ಭಾರತಕ್ಕೆ ಯಾವುದೇ ಹಕ್ಕಿಲ್ಲ. ಭಾರತಕ್ಕೆ ಎರಡು ಆಯ್ಕೆಗಳಿವೆ, ಒಂದೋ ನೀರನ್ನು ನ್ಯಾಯಯುತವಾಗಿ ಹಂಚಿಕೊಳ್ಳಬೇಕು, ಇಲ್ಲದಿದ್ದರೆ ನಾವು ಎಲ್ಲಾ ಆರು ನದಿಗಳಿಂದ ನಮಗೆ ಬರಬೇಕಾದ ನೀರನ್ನು ಪಡೆದೇ ತೀರುತ್ತೇವೆ ಎಂದು ಗುಡುಗಿದ್ದಾರೆ. ಭಾರತವು ನೀರಿನ ಒಪ್ಪಂದವನ್ನು ಮುರಿದರೆ ಪಾಕಿಸ್ತಾನದ ಪ್ರತಿಯೊಬ್ಬ ಪ್ರಜೆಯೂ ಯುದ್ಧಕ್ಕೆ ಸಿದ್ಧನಾಗಬೇಕಾಗುತ್ತದೆ ಎಂದು ಅವರು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ.
ಇದರೊಂದಿಗೆ, ಪಹಲ್ಗಾಮ್ ಉಗ್ರರ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂಬ ಭಾರತದ ಆರೋಪವನ್ನು ಬಿಲಾವಲ್ ನಿರಾಕರಿಸಿದ್ದಾರೆ.

ಭಾರತವು ತನ್ನದೇ ಆದ ಆಂತರಿಕ ವೈಫಲ್ಯಗಳನ್ನು ಮುಚ್ಚಿಹಾಕಲು ಪಾಕಿಸ್ತಾನದ ಮೇಲೆ ಸುಳ್ಳು ಗೂಬೆ ಕೂರಿಸುತ್ತಿದೆ ಮತ್ತು ಭಯೋತ್ಪಾದನೆಯನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳುತ್ತಿದೆ ಎಂದು ಅವರು ಪ್ರತ್ಯಾರೋಪ ಮಾಡಿದ್ದಾರೆ. ಉಭಯ ದೇಶಗಳ ನಡುವೆ ಮಾತುಕತೆ ಮತ್ತು ಭಯೋತ್ಪಾದನೆ ತಡೆಗೆ ಪರಸ್ಪರ ಸಹಕಾರ ಇಲ್ಲದಿದ್ದರೆ ಹಿಂಸಾಚಾರ ಮತ್ತಷ್ಟು ಹೆಚ್ಚಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತವು ಉಗ್ರರ ವಿರುದ್ಧ ಕೈಗೊಂಡ 'ಆಪರೇಷನ್ ಸಿಂದೂರ್' ಸೇನಾ ಕಾರ್ಯಾಚರಣೆ ಮತ್ತು ಸಿಂಧೂ ನದಿ ಒಪ್ಪಂದಕ್ಕೆ ತಂದಿರುವ ತಡೆ ಪಾಕಿಸ್ತಾನದಲ್ಲಿ ತಲ್ಲಣ ಮೂಡಿಸಿದೆ. ಜಾಗತಿಕ ಮಟ್ಟದಲ್ಲೂ ಭಾರತವು ಪಾಕಿಸ್ತಾನವನ್ನು ಒಂಟಿಯಾಗಿಸಲು ರಾಜತಾಂತ್ರಿಕ ಒತ್ತಡ ಹೇರುತ್ತಿರುವುದರಿಂದ ಬಿಲಾವಲ್ ಭುಟ್ಟೋ ಇಂತಹ ಹತಾಶೆಯ ಯುದ್ಧದ ಎಚ್ಚರಿಕೆಗಳನ್ನು ನೀಡುತ್ತಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಭಾವಿಸಿದ್ದಾರೆ. ಉಭಯ ದೇಶಗಳ ನಡುವಿನ ಈ ಜಲವಿವಾದ ಈಗ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.