ಬೆಂಗಳೂರು: ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದ ಏರ್ ಇಂಡಿಯಾ ವಿಮಾನವು ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವಾಗ ವಿಮಾನದ ಹಿಂಬಾಗ ರನ್‌ವೇಗೆ ಅಪ್ಪಳಿಸಿದೆ.ಕೂದಲೆಳೆ ಅಂತರದಲ್ಲಿ ದುರಂತ ತಪ್ಪಿದೆ. ಅದೃಷ್ಟವಶಾತ್ ವಿಮಾನದಲ್ಲಿದ್ದ ಎಲ್ಲ 180 ಪ್ರಯಾಣಿಕರು ಸೇರಿದಂತೆ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಏರ್ ಇಂಡಿಯಾದ AI2651 ಸಂಖ್ಯೆಯ ವಿಮಾನ ಇಂದು ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿತ್ತು. ಲ್ಯಾಂಡಿಂಗ್ ವೇಳೆ ಉಂಟಾದ ತಾಂತ್ರಿಕ ಅಡಚಣೆಯಿಂದ ಅವಘಡ ಸಂಭವಿಸಿದೆ. ಈ ವಿಮಾನಕ್ಕೂ ಮುನ್ನ ಸರಕು ಸಾಗಣೆ ವಿಮಾನವೊಂದು ಅದೇ ರನ್‌ವೇಯಿಂದ ಟೇಕ್ ಆಫ್ ಆಗಿತ್ತು. ಇದರಿಂದ ವಾತಾವರಣದಲ್ಲಿ ಉಂಟಾದ ಗಾಳಿಯ ತೀವ್ರ ವೇಗದಿಂದ ಏರ್ ಇಂಡಿಯಾ ವಿಮಾನದ ಸಮತೋಲನ ತಪ್ಪಿದೆ. ಪೈಲಟ್ ಪುನಃ ಹಾರಾಟ ನಡೆಸಲು ಪ್ರಯತ್ನಿಸಿದ್ದಾರೆ. ಈ ವೇಳೆ ವಿಮಾನದ ಹಿಂಭಾಗ ರನ್‌ವೇಗೆ ಅಪ್ಪಳಿಸಿದೆ.
ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಈ ಅವಘಡ ಕುರಿತು ತನಿಖೆಗೆ ಆದೇಶಿಸಿದೆ. ತಾಂತ್ರಿಕ ಸಮಸ್ಯೆ ಕಾರಣವೇ ಅಥವಾ ಪೈಲಟ್ಗಳ ಎಡವಟ್ಟು ಕಾರಣವೇ ಎಂಬ ಬಗ್ಗೆ ತನಿಖೆ ನಡೆಯಲಿದೆ. ತನಿಖೆ ಮುಗಿಯುವವರೆಗೆ ವಿಮಾನ ಚಲಾಯಿಸುತ್ತಿದ್ದ ಪೈಲಟ್‌ಗಳನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.
ಅಪಘಾತಕ್ಕೀಡಾದ ವಿಮಾನವನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಬೆಂಗಳೂರಿನಿಂದ ದೆಹಲಿಗೆ ಮರಳಬೇಕಾಗಿದ್ದ ವಿಮಾನದ ಸೇವೆಯನ್ನು ರದ್ದುಗೊಳಿಸಲಾಗಿದೆ. ಏರ್ ಇಂಡಿಯಾ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಿದೆ ಹಾಗೂ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿದೆ.