2026-05-21 09:45:37

ಸಿದ್ದರಾಮಯ್ಯ- ಶಿವಕುಮಾರ್ ನಡುವೆ ಜಗಳ ಮಾಡಿಸುವ ಖರ್ಗೆ: ರಾಧಾಮೋಹನ್ ದಾಸ್ ಅಗ್ರವಾಲ್ ಆರೋಪ|Speed News Kannada

ಸಿದ್ದರಾಮಯ್ಯ- ಶಿವಕುಮಾರ್ ನಡುವೆ ಜಗಳ ಮಾಡಿಸುವ ಖರ್ಗೆ: ರಾಧಾಮೋಹನ್ ದಾಸ್ ಅಗ್ರವಾಲ್ ಆರೋಪ|Speed News Kannada

ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಂಗನ ಮಾದರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎಂಬ ರಾಜ್ಯದ ಎರಡು ಬೆಕ್ಕುಗಳ ಜತೆ ಜಗಳ ಮಾಡಿಸುತ್ತಿದ್ದಾರೆ ಎಂದು ಬಿಜೆಪಿ ಕರ್ನಾಟಕ ರಾಜ್ಯ ಉಸ್ತುವಾರಿ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾಮೋಹನ್ ದಾಸ್ ಅಗ್ರವಾಲ್ ವ್ಯಂಗ್ಯವಾಡಿದ್ದಾರೆ. .

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇವರ ನಡುವೆ ಜಗಳ ಹಚ್ಚಿ ತಾವು ಮುಖ್ಯಮಂತ್ರಿಯಾಗಲು ಖರ್ಗೆಯವರು ಕಾಯುತ್ತಿದ್ದಾರೆ. ಕಾಂಗ್ರೆಸ್ಸಿನ ಸ್ಥಿತಿ ಹದಗೆಟ್ಟಿದೆ. ಹಲವಾರು ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ನಾಳೆ ವಿಧಾನಸಭೆ ಚುನಾವಣೆ ನಡೆದರೂ ಜನರು ಕಾಂಗ್ರೆಸ್ಸನ್ನು ಸೋಲಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತಾರೆ ಎಂದರು.  

ವಿಪರೀತ ಸಾಲ ಮಾಡಿರುವುದರಿಂದ ಕರ್ನಾಟಕ ಆರ್ಥಿಕ ಸಂಕಷ್ಟದಲ್ಲಿದೆ. ಆರೇಳು ತಿಂಗಳುಗಳಿಂದ ಇಲ್ಲಿ ಸರಕಾರವೇ ಇಲ್ಲವಾಗಿದೆ. ಪರಸ್ಪರ ಜಗಳ ಮಾಡಿಕೊಳ್ಳುತ್ತಿದ್ದಾರೆ ಎಂದು ಆಕ್ಷೇಪಿಸಿದರು.

ಪೂರ್ಣಾವಧಿ ರಾಜ್ಯ ಅಧ್ಯಕ್ಷರಿದ್ದು, ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಅಧ್ಯಕ್ಷರಾಗಿ ಮುಂದುವರೆಯುವರೇ ಇಲ್ಲವೇ ಎಂಬುದು ಇಲ್ಲಿನ ಸಭೆಯಲ್ಲಿ ನಿರ್ಧಾರ ಆಗುವುದಿಲ್ಲ. ಇಲ್ಲಿ ಅಧ್ಯಕ್ಷರ ಮೌಲ್ಯಮಾಪನ ನಡೆಯುತ್ತದೆ ಎಂಬ ಭ್ರಮೆ ಇದ್ದರೆ ಅದು ಸರಿಯಲ್ಲ ಎಂದರು.

ಹೊಸ ಅಧ್ಯಕ್ಷರು ಬಂದಾಗ ಹೊಸ ತಂಡ ರಚಿಸಲಾಗುತ್ತದೆ. ಹೊಸ ಅಧ್ಯಕ್ಷರು ಬಂದರೆ ಕೋರ್ ಕಮಿಟಿ ಬದಲಾಗುವುದಿಲ್ಲ. ಅದನ್ನು ರಾಷ್ಟ್ರ ಘಟಕವು ನಿರ್ಧರಿಸುತ್ತದೆ. ಒಂದಿಬ್ಬರು ಹಳೆಯವರನ್ನು ಬದಲಿಸಿ ಹೊಸಬರು ಬರಬಹುದು ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು.

2027ರಲ್ಲಿ ವಿಧಾನಸಭಾ ಚುನಾವಣೆ ಇದೆ. ರಾಜ್ಯದಲ್ಲಿ ವಿಫಲ, ಭ್ರಷ್ಟಾಚಾರಿಗಳ ಸರಕಾರ ಇದೆ. ತುಷ್ಟೀಕರಣ ಆಧರಿತ ಸರಕಾರ ಇದಾಗಿದೆ. ಸರ್ಕಾರ ಕರ್ನಾಟಕದ ಜನರಿಗೆ ಮೋಸ ಮಾಡಿದೆ. ಗ್ಯಾರಂಟಿಗಳನ್ನೂ ಸರಿಯಾಗಿ ನೀಡಿಲ್ಲ ಎಂದು ಟೀಕಿಸಿದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.