ಬೆಂಗಳೂರು: ರಾಜಧಾನಿ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ (ಆರ್‌ಆರ್ ನಗರ) ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಸ್ಯಾಂಡಲ್‌ವುಡ್ ನಟಿ ಕೃಷಿ ತಾಪಂಡ ಅವರು ಬಾಡಿಗೆಗೆ ಪಡೆದಿದ್ದ ಅಪಾರ್ಟ್‌ಮೆಂಟ್ ಫ್ಲ್ಯಾಟ್‌ನಲ್ಲಿ ಅವರ ಆಪ್ತ ಸ್ನೇಹಿತ ವೈಶಾಖ್ ಉಪಾಧ್ಯಾಯ (45) ಎಂಬುವವರು ತಡರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಟಿಯ ಫ್ಲ್ಯಾಟ್ ನಲ್ಲೇ ಈ ದುರಂತ ಸಂಭವಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕೃಷಿ ತಾಪಂಡ ಅಪಾರ್ಟ್‌ಮೆಂಟ್‌ಗೆ ಬಂದಿದ್ದ ವೈಶಾಖ್ ಮೂಲಗಳ ಪ್ರಕಾರ, ಆತ್ಮಹತ್ಯೆಗೆ ಶರಣಾದ ವೈಶಾಖ್ ಉಪಾಧ್ಯಾಯ ಬೆಂಗಳೂರಿನ ಗಿರಿನಗರದ ನಿವಾಸಿಯಾಗಿದ್ದರು. ಇವರು ನಟಿ ಕೃಷಿ ತಾಪಂಡ ಅವರ ಆಪ್ತ ಸ್ನೇಹಿತ ಎಂದು ಹೇಳಲಾಗಿದೆ. ಆರ್‌ಆರ್ ನಗರದ ಪ್ರಮುಖ ವಲಯದಲ್ಲಿರುವ 'ಎಲಿಗಂಟ್ ಟೆರೇಸ್' ಅಪಾರ್ಟ್‌ಮೆಂಟ್‌ನಲ್ಲಿ ನಟಿ ಕೃಷಿ ತಾಪಂಡ ಅವರು ಫ್ಲ್ಯಾಟ್ ಒಂದನ್ನು ಬಾಡಿಗೆಗೆ ಪಡೆದು ವಾಸಿಸುತ್ತಿದ್ದರು. ಆದರೆ, ಕಳೆದ ಒಂದು ವಾರದಿಂದ ನಟಿ ಕೃಷಿ ತಾಪಂಡ ಅವರು ಈ ಅಪಾರ್ಟ್ ಮೆಂಟ್‌ನಲ್ಲಿ ಇರಲಿಲ್ಲ, ವೈಯಕ್ತಿಕ ಅಥವಾ ವೃತ್ತಿಪರ ಕೆಲಸಗಳ ನಿಮಿತ್ತ ಅವರು ಹೊರಗಡೆ ತೆರಳಿದ್ದರು ಎನ್ನಲಾಗಿದೆ. ಇದೇ ಅವಧಿಯಲ್ಲಿ ಸ್ನೇಹಿತೆಯ ರೂಮಿಗೆ ಬಂದಿದ್ದ ವೈಶಾಖ್, ತಡರಾತ್ರಿ ಯಾರೂ ಇಲ್ಲದ ವೇಳೆ ಫ್ಯಾನ್‌ಗೆ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ.
ಸ್ಥಳಕ್ಕೆ ಧಾವಿಸಿದ ಆರ್‌ಆರ್ ನಗರ ಪೊಲೀಸರು ಬುಧವಾರ ತಡರಾತ್ರಿ ಈ ಘಟನೆ ನಡೆದಿದ್ದು ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಆರ್‌ಆರ್ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿ ಎಲಿಗಂಟ್ ಟೆರೇಸ್ ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಕೆಳಗಿಳಿಸಿ ಮಹಜರು ನಡೆಸಿದ ಪೊಲೀಸರು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ವೈಶಾಖ್ ಅವರು ಇಷ್ಟೊಂದು ದೊಡ್ಡ ಕಠಿಣ ನಿರ್ಧಾರ ಕೈಗೊಳ್ಳಲು ಅಸಲಿ ಕಾರಣವೇನು? ಅವರ ಆತ್ಮಹತ್ಯೆಯ ಹಿಂದೆ ವೈಯಕ್ತಿಕ ಅಥವಾ ಆರ್ಥಿಕ ಸಮಸ್ಯೆಗಳಿವೆಯೇ? ಎಂಬಿತ್ಯಾದಿ ಕೋನಗಳಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನೆ ನಡೆದಾಗ ನಟಿ ಸ್ಥಳದಲ್ಲಿ ಇಲ್ಲದಿದ್ದರೂ, ಅವರ ಬಾಡಿಗೆ ಮನೆಯಲ್ಲೇ ದುರಂತ ನಡೆದಿರುವುದರಿಂದ ಪೊಲೀಸರು ನಟಿ ಕೃಷಿ ತಾಪಂಡ ಅವರಿಂದಲೂ ಮಾಹಿತಿ ಪಡೆಯುವ ಸಾಧ್ಯತೆ ಇದೆ.