ಕಲಬುರಗಿ: ಜಿಲ್ಲೆಯ ಮಾಡಬೂಳ ಗ್ರಾಮದಲ್ಲಿ ಸುಮಾರು 43 ಎಕರೆ ಪ್ರದೇಶ ವಿಸ್ತೀರ್ಣದಲ್ಲಿ ಅಂದಾಜು ರೂ. 35 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಮೃಗಾಲಯವನ್ನು ಲೋಕಾರ್ಪಣೆ ಮಾಡಲಾಗಿದೆ.
ಸಚಿವರಾದ ಈಶ್ವರ್ ಖಂಡ್ರೆ ಮತ್ತು ಪ್ರಿಯಾಂಕ್ ಖರ್ಗೆ ಮೃಗಾಲಯವನ್ನು ಉದ್ಘಾಟಿಸಿದರು.
ಈ ಮೃಗಾಲಯವು 56 ಜಾತಿಯ ಪ್ರಾಣಿ-ಪಕ್ಷಿಗಳಿಗೆ ನೆಲೆ ಕಲ್ಪಿಸಿದೆ. ಇದು ಕಲ್ಯಾಣ ಕರ್ನಾಟಕ ಪ್ರದೇಶದ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿ ಬೆಳೆಯಲಿದೆ. ಈ ಭಾಗದ ಜನರು ಹಾಗೂ ಮಕ್ಕಳು ವನ್ಯಜೀವಿಗಳ ವೀಕ್ಷಣೆ ಮತ್ತು ಅವುಗಳ ಕುರಿತು ತಿಳಿದುಕೊಳ್ಳಲು ಇನ್ನು ದೂರದ ಊರುಗಳ ಮೃಗಾಲಯಗಳಿಗೆ ಭೇಟಿ ನೀಡಬೇಕಿಲ್ಲ. ಮಾಡಬೂಳ ಮೃಗಾಲಯವು ಮಕ್ಕಳಿಗೆ ಶಿಕ್ಷಣ ಮತ್ತು ಮನರಂಜನೆ ಒದಗಿಸುವ ತಾಣವಾಗಲಿದೆ.
ನೂತನ ಮೃಗಾಲಯದಲ್ಲಿ ಸಮಗ್ರ ಮೂಲಸೌಕರ್ಯವನ್ನು ಪೂರ್ಣಗೊಳಿಸಲಾಗಿದೆ. ಕಲ್ಲಿನ ಗೋಡೆಯ ಕಾಂಪೌಂಡ್, 20 ಮೀ. ಅಗಲವಾದ ಪ್ರವೇಶ ರಸ್ತೆ, ಪ್ರವೇಶ ದ್ವಾರ, ಪಾರ್ಕಿಂಗ್ ವ್ಯವಸ್ಥೆ, ನೀರು ಮತ್ತು ವಿದ್ಯುತ್ ಸೌಲಭ್ಯ, ಮೃಗಾಲಯದ ಪ್ರಾಣಿಗಳಿಗಾಗಿ ಆಸ್ಪತ್ರೆ, ಅಡುಗೆಮನೆ, ಶವ ಪರೀಕ್ಷಾ ಕೊಠಡಿ, ಕ್ವಾರಂಟೈನ್ ವಿಭಾಗ ಹಾಗೂ ಆಡಳಿತ ಕಟ್ಟಡ ಸಿದ್ಧವಾಗಿದೆ. ಸಾರ್ವಜನಿಕರಿಗೆ ಕುಡಿಯುವ ನೀರು, ಶೌಚಾಲಯ, ಕುಳಿತುಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ.
ಈ ನೂತನ ಮೃಗಾಲಯವು ಕಲಬುರಗಿಯ ಪ್ರವಾಸೋದ್ಯಮಕ್ಕೆ ಬಲ ನೀಡಲಿದೆ. ಇದರಿಂದ ಜಿಲ್ಲೆಯ ಆರ್ಥಿಕತೆಗೂ ಬಹುದೊಡ್ಡ ಕೊಡುಗೆ ಸಿಗಲಿದೆ ಎಂದು ಪ್ರಿಯಾಂಕ್ ಖರ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.