2026-03-07 05:05:22

Yediyurappas birthday celebration | ಯಡಿಯೂರಪ್ಪ ಹುಟ್ಟು ಹಬ್ಬ ಆಚರಣೆ ಚುನಾವಣಾ ರಣಕಹಳೆ ಮೊಳಗಿಸಲು ವಿಜಯೇಂದ್ರ ಚಿಂತನೆ | Speed News Kannada

Yediyurappas birthday celebration | ಯಡಿಯೂರಪ್ಪ ಹುಟ್ಟು ಹಬ್ಬ ಆಚರಣೆ ಚುನಾವಣಾ ರಣಕಹಳೆ ಮೊಳಗಿಸಲು ವಿಜಯೇಂದ್ರ ಚಿಂತನೆ | Speed News Kannada

ಬೆಂಗಳೂರು: ರಾಜ್ಯದಲ್ಲಿ ಸರಣಿ ಚುನಾವಣೆಗಳು ಎದುರಾಗುತ್ತಿವೆ. ವಿಧಾನಸಭಾ ಉಪ ಚುನಾವಣೆ, ಜಿಲ್ಲಾ, ತಾಲೂಕು ಪಂಚಾಯಿತಿ, ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗಳಿಗೆ ಚುನಾವಣೆ ನಡೆಯಲಿದೆ.  ಈ ಚುನಾವಣೆಗಳನ್ನು ಎದುರಿಸಲು ಬಿಜೆಪಿ ಸಶಕ್ತ ಅಲ್ಲ ಎನ್ನುವುದು ಜಗಜ್ಜಾಹೀರಾಗಿದೆ. ಮನೆಯೊಂದು ಮೂರು ಬಾಗಿಲು ಎನ್ನುವಂತೆ ಒಬ್ಬೊಬ್ಬ ನಾಯಕ ಒಂದೊಂದು ದಿಕ್ಕಿಗೆ ಮುಖ ಮಾಡಿ ನಿಂತಿದ್ದಾರೆ.  ರಾಜ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ, ವಿಪಕ್ಷ ನಾಯಕರಾದ ಆರ್‌ ಅಶೋಕ್‌, ಛಲವಾದಿ ನಾರಾಯಸ್ವಾಮಿ ಮೂವರಿಗೂ ತಾಳಮೇಳವೇ ಇಲ್ಲವಾಗಿದೆ. ಇನ್ನು ದೆಹಲಿ ಮಟ್ಟದಲ್ಲಿ ಕಾಣದ ಕೈಗಳೂ ರಾಜ್ಯ ರಾಜಕಾರಣದಲ್ಲಿ ಕೈಯಾಡಿಸುತ್ತಿವೆ.
ಏನೇ ಆದರೂ ಪಕ್ಷದ ಅಧ್ಯಕ್ಷರಾದವರಿಗೆ ಹೆಚ್ಚಿನ ಜವಬ್ದಾರಿ ಇರುತ್ತದೆ. ಹಾಗಾಗಿ ವಿಜಯೇಂದ್ರ ಅವರು ತಮ್ಮ ತಂದೆ ಬಿ ಎಸ್‌ ಯಡಿಯೂರಪ್ಪ ಅವರ ನಾಮಬಲ ಬಳಸಿಕೊಂಡು ಚುನಾವಣೆಗಳನ್ನು ಎದುರಿಸಲು ತಂತ್ರ ಹೂಡಿದ್ದಾರೆ ಎನ್ನಲಾಗುತ್ತಿದೆ. ಬಿ.ಎಸ್. ಯಡಿಯೂರಪ್ಪ ರಾಜಕಾರಣ ಪ್ರವೇಶಿಸಿ ಐದು ದಶಕಗಳು. ಮೇಲಾಗಿ ಫೆಬ್ರವರಿ 27 ರಂದು ಯಡಿಯೂರಪ್ಪ ಅವರ ಜನ್ಮದಿನ. ಅವರ ಹುಟ್ಟುಹಬ್ಬವನ್ನು ಯಶಸ್ವಿಯಾಗಿ ಆಚರಿಸಿ ಚುನಾವಣಾ ರಣಕಹಳೆ ಮೊಳಗಿಸಲು ವಿಜಯೇಂದ್ರ ಮತ್ತು ಅವರ ತಂಡ ಸಜ್ಜಾಗಿದೆ.  ಸಿದ್ದರಾಮಯ್ಯ ಅವರಿಗೆ ರಾಜಕಾರಣದಲ್ಲಿ ತಿರುವು ನೀಡಿದ ಸಿದ್ದರಾಮೋತ್ಸವ ಮಾದರಿಯಲ್ಲಿ ಯಡಿಯೂರಪ್ಪ ಅವರ ಜನ್ಮದಿನಾಚರಣೆ ಆಚರಿಸಲು ನಿರ್ಧರಿಸಲಾಗಿದೆ. 
ಫೆಬ್ರವರಿ 27 ರಂದು ಅಥವಾ ಮಾರ್ಚ್‌ ತಿಂಗಳಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸುವ ಚಿಂತನೆ ನಡೆದಿದೆ. ಈ ಕಾರ್ಯಕ್ರಮಕ್ಕೆ ಲಕ್ಷ ಲಕ್ಷ ಜನರನ್ನು ಸೇರಿಸುವ ಉದ್ದೇಶವೂ ಇದೆ.  ಚಿತ್ರದುರ್ಗ ಅಥವಾ ಬಾಗಲಕೋಟೆಯಲ್ಲಿ ಈ ಬೃಹತ್ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. ಈ ಹಿಂದೆ ಯಡಿಯೂರಪ್ಪ ಅವರ  ಜನ್ಮದಿನದ ಆಚರಣೆಗೆ ಹೈಕಮಾಂಡ್ ತಡೆ ಒಡ್ಡಿತ್ತು. ಆದರೆ ಈಗ ಬದಲಾದ ಸನ್ನಿವೇಶದಲ್ಲಿ ಹೈಕಮಾಂಡ್ ಒಪ್ಪಿಗೆ ಸೂಚಿಸುವ ಅನಿವಾರ್ಯತೆಯೂ ಇದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.