2026-06-08 02:19:39

congress govt injustice to sc st; chalavadi Speed News Kannada

congress govt injustice to sc st; chalavadi  Speed News Kannada

ಬೆಂಗಳೂರು: ನಿನ್ನೆ ಮಂಡಿಸಲಾದ ರಾಜ್ಯ ಬಜೆಟ್ ಮೂಲಕ ಇಡೀ ರಾಜ್ಯದ ಜನರಿಗೆ ಮೂಗಿಗೆ ತುಪ್ಪ ಸವರುವುದು ಉಚಿತ, ಎಲ್ಲರ ತಲೆ ಮೇಲೆ ಸಾಲ ಖಚಿತ, ರಾಜ್ಯದ ಜನರಿಗೆ ಸಂಕಷ್ಟ ನಿಶ್ಚಿತ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಅವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯ ಸರಕಾರವು ಉಚಿತ, ಖಚಿತ, ನಿಶ್ಚಿತ ಎಂಬ ಘೋಷವಾಕ್ಯದಡಿ ಅಧಿಕಾರಕ್ಕೆ ಬಂದಿತ್ತು. ಪರಿಶಿಷ್ಟ ಜಾತಿ-ವರ್ಗಗಳಿಗೆ ಘೋಷಣೆಗಳು ಉಚಿತ, ದೋಖಾ ಖಚಿತ, ನಂಬಿದವರ ಸರ್ವನಾಶ ನಿಶ್ಚಿತ ಎಂಬ ಹಾಗಿದೆ ಎಂದು ವಿಶ್ಲೇಷಿಸಿದರು. 
ಪರಿಶಿಷ್ಟ ಜಾತಿ-ವರ್ಗಗಳಿಗೆ ಎಸ್‍ಇಪಿ, ಟಿಎಸ್‍ಪಿ 2023-24ರಲ್ಲಿ 30,930 ಕೋಟಿ,  2024-25ರಲ್ಲಿ 39,122, 2025-26ರಲ್ಲಿ 42,017 ಕೋಟಿ ಮತ್ತು ಈ ಬಾರಿ 44,632 ಕೋಟಿ ಇಟ್ಟಿದ್ದಾರೆ. 4 ವರ್ಷಗಳಲ್ಲಿ 1,56,701 ಕೋಟಿ ರೂ. ಕೊಟ್ಟ ಘೋಷಣೆ ಮಾಡಿದ್ದಾರೆ. ಜನರು ಬಹಳ ಖುಷಿ ಆಗಬಹುದು. ಇದರಲ್ಲಿ 7 ಸಿ ಅಡಿಯಲ್ಲಿ 78,350 ಕೋಟಿ ರೂಪಾಯಿಯನ್ನು ಪಿಡಬ್ಲ್ಯುಡಿ, ನೀರಾವರಿ ಮತ್ತಿತರ ಇಲಾಖೆಗಳಿಗೆ ಹಂಚಿದ್ದಾರೆ. ಉಳಿದ 78,350 ಕೋಟಿ ರೂಪಾಯಿಯಡಿ ಗ್ಯಾರಂಟಿಗಳಿಗೆ 53,059 ಕೋಟಿ ಬಳಸಿದ್ದಾರೆ ಎಂದು ಟೀಕಿಸಿದರು.
ದಲಿತ ಹೋರಾಟಗಾರರು, ದಲಿತ ಸಂಘಟನೆಗಳು ಪ್ರಶ್ನಿಸಲು ಸಲಹೆ
ದಲಿತ ಹೋರಾಟಗಾರರು, ದಲಿತ ಸಂಘಟನೆಗಳು ಇದನ್ನು ಅರ್ಥ ಮಾಡಿಕೊಂಡು ಸರಕಾರದ ವಿರುದ್ಧ, ಮುಖ್ಯಮಂತ್ರಿಗಳ ವಿರುದ್ಧ ಪ್ರಶ್ನೆ ಕೇಳದೇ ಇದ್ದಲ್ಲಿ ನಿಮ್ಮ ತಲೆಯ ಮೇಲೆ ನೀವೇ ಬಂಡೆ ಹಾಕಿಕೊಂಡಂತೆ ಎಂದು ಎಚ್ಚರಿಸಿದರು. 2025-26ರಲ್ಲಿ ಅಂಬೇಡ್ಕರ್ ನಿಗಮಕ್ಕೆ 125 ಕೋಟಿ, ತಾಂಡಾ ನಿಗಮ- 75 ಕೋಟಿ, ಆದಿ ಜಾಂಬವ ನಿಗಮ- 62 ಕೋಟಿ, ಬೋವಿ ನಿಗಮ- 68 ಕೋಟಿ, ಸಫಾಯಿ ಕರ್ಮಚಾರಿ ನಿಗಮ- 31 ಕೋಟಿ, ವಾಲ್ಮೀಕಿ ನಿಗಮ- 156 ಕೋಟಿ, ಲಿಡ್ಕರ್ ನಿಗಮ- 43 ಕೋಟಿ ಸೇರಿ 562 ಕೋಟಿ ಕೊಡುವುದಾಗಿ ತಿಳಿಸಿದ್ದರು. 2025-26ರಲ್ಲಿ 42,017 ಕೋಟಿ ಪೈಕಿ 14 ಸಾವಿರ ಕೋಟಿ ಗ್ಯಾರಂಟಿಗೆ ಹೋಗಿದೆ. ಕೇವಲ 7 ಸಾವಿರ ಕೋಟಿ ಸಮಾಜ ಕಲ್ಯಾಣಕ್ಕೆ ಕೊಟ್ಟಿದ್ದೀರಿ. ಅದರಲ್ಲಿ ನಿಗಮಗಳಿಗೆ ನೀವು ಕೊಟ್ಟಿದ್ದು ಕೇವಲ 562 ಕೋಟಿ ಎಂದು ಗಮನ ಸೆಳೆದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.