ಕೋಲ್ಕತ್ತ: ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಪ್ರತಿಪಾದಿಸಿದ್ದಾರೆ. ಜನರ ಹಕ್ಕುಗಳನ್ನು ಕಸಿದುಕೊಂಡು, ಇವಿಎಂಗಳನ್ನು ಲೂಟಿ ಮಾಡುವ ಮೂಲಕ ಮುಖ್ಯ ಚುನಾವಣಾ ಆಯುಕ್ತರು ಈ ಚುನಾವಣೆಯ ಖಳನಾಯಕರಾಗಿದ್ದಾರೆ ಎಂದೂ ಅವರು ವಾಗ್ದಾಳಿ ನಡೆಸಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ನಮಗೆ ಘೋರ ಅನ್ಯಾಯವಾಗಿದೆ. ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ. ನ್ಯಾಯಯುತವಾಗಿ ಚುನಾವಣೆ ನಡೆದಿದ್ದರೆ ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೆ. ಆದರೆ ಈಗ ರಾಜಭವನಕ್ಕೆ ಹೋಗಿ ರಾಜೀನಾಮೆ ಸಲ್ಲಿಸುವ ಮಾತೇ ಇಲ್ಲ. ಬಿಜೆಪಿ 100ಕ್ಕೂ ಹೆಚ್ಚು ಸ್ಥಾನಗಳನ್ನು ಲೂಟಿ ಮಾಡಿದೆ. ನಾವು ಚುನಾವಣೆಯಲ್ಲಿ ಸೋತಿಲ್ಲ. ಮರು ಮತ ಎಣಿಕೆ ನಡೆಯಬೇಕು. ಅಲ್ಲಿಯವರೆಗೂ ನಾನೂ ರಾಜೀನಾಮೆ ನೀಡುವುದಿಲ್ಲ ಎಂದು ಅವರು ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಚುನಾವಣಾ ಅಕ್ರಮದಲ್ಲಿ ಪ್ರಧಾನಿ ಮತ್ತು ಗೃಹ ಸಚಿವರೂ ಭಾಗಿಯಾಗಿದ್ದಾರೆ. ನನ್ನ ಜೀವನದಲ್ಲಿ ನಾನು ಈ ರೀತಿಯ ಚುನಾವಣೆಯನ್ನು ನೋಡಿಲ್ಲ. ಚುನಾವಣಾ ಆಯೋಗವು ಅಸಹ್ಯವಾಗಿ ನಡೆದುಕೊಳ್ಳುತ್ತಿದೆ. ಮಹಾರಾಷ್ಟ್ರ, ಹರಿಯಾಣ, ಬಿಹಾರ ಮತ್ತು ಈಗ ಬಂಗಾಳದಲ್ಲಿ ಮತಗಳನ್ನು ಕಳ್ಳತನ ಮಾಡಲಾಗಿದೆ. ನಮ್ಮ ಪಕ್ಷದ ನಿಜವಾದ ಪ್ರತಿಸ್ಪರ್ಧಿ ಬಿಜೆಪಿ ಅಲ್ಲ, ಬದಲಾಗಿ ಚುನಾವಣಾ ಆಯೋಗ ಎಂದು ಕಿಡಿಕಾರಿದ್ದಾರೆ.
ಮತದಾನದ ನಂತರವೂ ಇವಿಎಂಗಳಲ್ಲಿ ಶೇ. 80-90 ರಷ್ಟು ಚಾರ್ಜ್ ಇರುತ್ತದೆ ಎಂದರೆ ನಂಬುವುದು ಹೇಗೆ? ನಾನು ಇನ್ನು ಮುಂದೆ ಬಿಜೆಪಿಯ ದೌರ್ಜನ್ಯಗಳನ್ನು ಸಹಿಸುವುದಿಲ್ಲ. ಇನ್ನು ಮುಂದೆ ಬೀದಿಗಿಳಿಯುತ್ತೇನೆ. ನೈತಿಕವಾಗಿ ನಾವು ಚುನಾವಣೆಯನ್ನು ಗೆದ್ದಿದ್ದೇವೆ. ಹೀಗಾಗಿ ರಾಜೀನಾಮೆ ಕೊಡುವುದಿಲ್ಲ ಎಂದು ಒತ್ತಿ ಹೇಳಿದರು.