2026-06-08 01:33:15

withdraw hijab permission; bjp president vijayendra demand govt| ಹಿಜಾಬ್ ಅನುಮತಿಯನ್ನು ಕೂಡಲೇ ಹಿಂಪಡೆಯಲು ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಆಗ್ರಹ| Speed News Kannada

withdraw hijab permission; bjp president vijayendra demand govt| ಹಿಜಾಬ್ ಅನುಮತಿಯನ್ನು ಕೂಡಲೇ ಹಿಂಪಡೆಯಲು ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಆಗ್ರಹ| Speed News Kannada

ಬೆಂಗಳೂರು: ಶಾಲಾ ಕಾಲೇಜುಗಳಲ್ಲಿ ಮಕ್ಕಳಲ್ಲಿ ಏಕತೆಯನ್ನು ತರುವ ಉದ್ದೇಶದಿಂದ ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಸಮವಸ್ತ್ರ ನಿಯಮವನ್ನು ಹಿಂಪಡೆದಿರುವುದಕ್ಕೆ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ  ಬಿಜೆಪಿ ರಾಜ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಅವರು ಸರ್ಕಾರದ ನಿರ್ಧಾರವನ್ನು ಖಂಡಿಸಿದ್ದಾರೆ.

ಸಮವಸ್ತ್ರದ ಮೂಲ ಆಶಯವೇ ಮಕ್ಕಳಲ್ಲಿ ಮೇಲು-ಕೀಳು, ಜಾತಿ-ಮತದ ಭೇದ ಮರೆಸಿ ಸಮಾನತೆಯ ದೀಕ್ಷೆ ನೀಡುವುದಾಗಿದೆ. ಕೇವಲ ಓಟ್ ಬ್ಯಾಂಕ್ ವರ್ಗದ ಓಲೈಕೆಗಾಗಿ ಶಾಲಾ ಆವರಣದಲ್ಲೂ ಮತೀಯ ವಿಭಜನೆಗೆ ಸರ್ಕಾರ ಕೈಹಾಕಿದೆ. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಶೈಕ್ಷಣಿಕ ಪಾವಿತ್ರ್ಯತೆಗಿಂತ ವೋಟ್ ಬ್ಯಾಂಕ್ ರಾಜಕಾರಣಕ್ಕೇ ಆದ್ಯತೆ ನೀಡುತ್ತದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಮಕ್ಕಳಿಗೆ ಹಿಜಾಬ್ ಧರಿಸಲು ಸರ್ಕಾರ ಅವಕಾಶ ನೀಡಿ, ಕೇಸರಿ ಶಾಲ್ ಧರಿಸುವುದಕ್ಕೆ ನಿರ್ಬಂಧ ವಿಧಿಸಿರುವ ತುಘಲಕ್ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ವಿದ್ಯಾರ್ಥಿಗಳಲ್ಲಿ  ಕೋಮು ಸಂಕೇತ ಪ್ರತಿನಿಧಿಸುವ ವಸ್ತ್ರ ಧರಿಸಲು ಅವಕಾಶ ನೀಡುವುದು ಹಾಗೂ ಪ್ರೇರಣೆ ನೀಡುವುದು ಶಿಕ್ಷಣ ಸರೋವರಕ್ಕೆ ಕೆಸರು ತುಂಬುವ ಕೆಟ್ಟ ನಡೆಯಾಗುತ್ತದೆ. ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರ ಅಕ್ಷರಶಃ ಅವಿವೇಕಿತನದ ಪರಮಾವಧಿಯಾಗಿದೆ. ನಮ್ಮ ಶಿಕ್ಷಣ ವ್ಯವಸ್ಥೆಗೆ ಕೋಮು ಸಂಕೇತಿಸುವ ಹಿಜಾಬ್ ನಿಂದ ಉಸಿರುಗಟ್ಟಿಸಿ, ಶಿಕ್ಷಣ ಕ್ಷೇತ್ರದಲ್ಲಿಯೂ ಕೋಮುವಾದದ ಜ್ವಾಲೆ ಹತ್ತಿಸಬೇಡಿ ಎಂದಿದ್ದಾರೆ.

ಶಿಕ್ಷಣ ಸುಧಾರಣೆಯ ಯೋಜನೆ ಹಾಗೂ ಕಾರ್ಯಕ್ರಮಗಳ ಕುರಿತು ತಲೆಕೆಡಿಸಿಕೊಳ್ಳದ  ಶಿಕ್ಷಣ ಇಲಾಖೆ ಸರ್ಕಾರಿ ಶಾಲಾ ಕಟ್ಟಡಗಳ ಸುರಕ್ಷತೆ, ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿಯೂ ವಿಫಲವಾಗಿದೆ, ನೈಜ ಶಿಕ್ಷಣ ಬದ್ಧತೆಯನ್ನು ಪ್ರದರ್ಶಿಸುವ ಬದಲು ಸದ್ಯ ಇರುವ ವ್ಯವಸ್ಥೆಯನ್ನೂ ಕುಲಗೆಡಿಸುತ್ತಿರುವುದು ಶಿಕ್ಷಣ ವಿದ್ರೋಹಿ ಕ್ರಮವಾಗಿದೆ. ಈ ಕೂಡಲೇ ಹಿಜಾಬ್ ಅನುಮತಿಯ ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳದೇ ಹೋದರೆ ಮುಂದೆ ಉದ್ಭವಿಸಲಿರುವ ಅನಾಹುತಗಳಿಗೆ ಕಾಂಗ್ರೆಸ್‌ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದೂ ವಿಜಯೇಂದ್ರ ಎಚ್ಚರಿಸಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.