ಹಾಸನ: ವಿಧಾನಸಭಾ 2028ರ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಅಧಿಕಾರಕ್ಕೆ ಬರಲಿದ್ದು, ಮೈತ್ರಿಕೂಟದಿಂದ ಎಚ್.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ. ಇದೇ ವೇಳೆ ಸಿಎಂ ಸ್ಥಾನ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಕುಮಾರಸ್ವಾಮಿ ಅವರು 2028ರ ಮುಖ್ಯಮಂತ್ರಿ ರೇಸ್ ನಲ್ಲಿ ತುಂಬಾ ಜನ ಇದ್ದಾರೆ ಎನ್ನುತ್ತಾ ತಮ್ಮ ಮನದಾಸೆಯನ್ನು ಬಿಚ್ಚಿಟ್ಟಿದ್ದಾರೆ.
ಹಾಸನದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಕಾರ್ಯಕ್ರಮದಲ್ಲಿ ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಎಂಬ ಘೋಷಣೆ ಮೊಳಗಿತ್ತು. ಅಭಿಮಾನಿಗಳ ಕೂಅಭಿಮಾನ ಕುರಿತು ಮಾತಾಡಿದ ಕುಮಾರಸ್ವಾಮಿ ನಾನು, ಹಲವಾರು ಬಾರಿ ಹೇಳಿದ್ದೇನೆ , ನಾನು ಮುಖ್ಯಮಂತ್ರಿ ಆಗೋದು ಮುಖ್ಯ ಅಲ್ಲ, ಜನರ ಬದುಕನ್ನು ಸರಿಪಡಿಸಬೇಕು ಅನ್ನೋದು ನನ್ನ ಉದ್ದೇಶ. ಈ ಕೆಟ್ಟ ರೀತಿಯ ಸರ್ಕಾರವನ್ನು ಕಿತ್ತು ಹಾಕಬೇಕು ಎಂದು ಕುಮಾರಸ್ವಾಮಿ ಗುಡುಗಿದ್ದರು.
ನಮ್ಮ ಹಣೆಯಲ್ಲಿ ಏನು ಬರೆದಿರುತ್ತೆ ಅದು ಆಗುತ್ತದೆ. ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮನ್ನು ಯಾವುದೋ ಒಂದು ಶಕ್ತಿ ಆಡಿಸುತ್ತಿರುತ್ತದೆ. ನಮ್ಮಕರ್ತವ್ಯ ನಾವು ಮಾಡುತ್ತಿರಬೇಕು ಅಷ್ಟೇ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಅನೇಕ ಮಂದಿ 2028ಕ್ಕೆ ಮುಖ್ಯಮಂತ್ರಿ ರೇಸ್ ನಲ್ಲಿ ಇದ್ದಾರೆ. ಮುಖ್ಯಮಂತ್ರಿ ಆಗಬೇಕು ಎಂದು ಹಲವರು ಕಾಯ್ತಿದ್ದಾರೆ. ಅವರನ್ನೆಲ್ಲಾ ಓವರ್ ಟೇಕ್ ಮಾಡಿ ಮುಖ್ಯಮಂತ್ರಿ ಆಗಬೇಕಲ್ವಾ? ಏನಾಗುತ್ತೆ ನೋಡೋಣ ಎನ್ನುವ ಮೂಲಕ ಮನದಲ್ಲಿರೋ ಸಿಎಂ ಆಸೆ ಬಿಚ್ಚಿಟ್ಟಿದ್ದಾರೆ ಅಭಿಮಾನಿಗಳ ನೆಚ್ಚಿನ ಕುಮಾರಣ್ಣ.