ಚಿಕ್ಕಮಗಳೂರು: ಕಾಡಾನೆಗಳ ಹಾವಳಿ ತಪ್ಪಿಸಲು ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಇಂದು ಶೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಪ್ಪ, ಎನ್.ಆರ್.ಪುರ, ಮತ್ತು ಶೃಂಗೇರಿ ತಾಲೂಕುಗಳಲ್ಲಿ ಬಂದ್ ಗೆ ಕರೆ ನೀಡಲಾಗಿದೆ. ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಈ ಎಲ್ಲ ಪಟ್ಟಣಗಳು ಸಂಪೂರ್ಣವಾಗಿ ಬಂದ್ ಆಗಿವೆ.
ಅಂಗಡಿ ಮುಂಗಟ್ಟು ಮುಚ್ಚಿ ವರ್ತಕರು ಬಂದ್ ಬೆಂಬಲಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಬಾಳೆಹೊನ್ನೂರಿನ ಜೆಸಿಐ ಸರ್ಕಲ್ ನಲ್ಲಿ ಪ್ರತಿಭಟನಾ ಸಭೆ ನಡೆಯುತ್ತಿದ್ದು, ರಾಜ್ಯ ಸರ್ಕಾರ ಮತ್ತು ಶೃಂಗೇರಿ ಶಾಸಕ ರಾಜೇಗೌಡ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಪಡಿಸಿದ್ದಾರೆ. ಪ್ರತಿಭಟನೆಗೆ ಬಿಜೆಪಿ, ಜೆಡಿಎಸ್ ಮತ್ತು ರೈತ ಸಂಘಟನೆಗಳು ಬೆಂಬಲ ಸೂಚಿಸಿವೆ.
ಭಾನುವಾರ ಚಿಕ್ಕಮಗಳೂರು ತಾಲ್ಲೂಕಿನ ಹುಣಸೇಹಳ್ಳಿ ಸಮೀಪದ ಹ್ಯಾರಂಬಿಪುರ ಗ್ರಾಮದಲ್ಲಿ ಕಾಡಾನೆ ದಾಳಿಗೆ ಹಾವೇರಿ ಜಿಲ್ಲೆಯ ಕಾರ್ಮಿಕ ಮಹಿಳೆ ಬಲಿಯಾಗಿದ್ದಾರೆ. ವಿಜಯನಗರ ಜಿಲ್ಲೆಯ ಕೂಡ್ಲಗಿ ಗೆದ್ದಲಗಟ್ಟೆ ಕಾಮಯ್ಯನಟ್ಟಿ ಬೋರಮ್ಮ(45) ಮೃತಪಟ್ಟವರು. ಒಂದೇ ವಾರದಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು ಸ್ಥಳೀಯರು, ಶವ ರಸ್ತೆ ಮಧ್ಯದಲ್ಲಿ ಇಟ್ಟು ಪ್ರತಿಭಟನೆ ನಡೆಸಿದ್ದರು.
ನಾಗೇಶ್‌ಗೌಡ ಎಂಬುವರ ತೋಟದಲ್ಲಿ ಭಾನುವಾರ ಬೆಳಿಗ್ಗೆ 9ರ ವೇಳೆಗೆ ಕಾರ್ಮಿಕರು ಹೋಗಿದ್ದರು. ಆಗ ಬೋರಮ್ಮ ಅವರ ಮೇಲೆ ಆನೆ ದಾಳಿ ನಡೆಸಿತ್ತು. ಉಳಿದ ಕಾರ್ಮಿಕರು ಅಲ್ಲಿಂದ ಓಡಿ ಹೋಗಿದ್ದರು.